ಬಿಜೆಪಿ ಜೈಲ್ ಭರೋ ಕಾರ್ಯಕರ್ತರ ಬಂಧನ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ. ೧೩- ಬಿಜೆಪಿ ಮತ್ತು ಆರ್‌ಎಸ್ಎಸ್‌ನವರು ಉಗ್ರಗಾಮಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ನಗರದಲ್ಲಿ ಜೈಲ್ ಭರೋ ಚಳವಳಿ ನಡೆಸಿ ಬಂಧನಕ್ಕೊಳಗಾದರು.  ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾಕರಂದ್ಲಾಜೆ ನೇತೃತ್ವದಲ್ಲಿ ಧರಣಿ, ರಸ್ತೆ ತಡೆ ನಡೆಸಿದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಆರ್ಎಸ್ಎಸ್ ಹಾಗೂ ಬಿಜೆಪಿಯವರು ಉಗ್ರಗಾಮಿಗಳು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ವಿರುದ್ದ ಏರು ಧ್ವನಿಯಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ವೋಟ್ ಬ್ಯಾಂಕ್‌ಗಾಗಿ ದೇಶಭಕ್ತ ಸಂಘಟನೆಯಾದ ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ಉಗ್ರರು ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು, ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ ಭಿತ್ತಿ ಪತ್ರ ಪ್ರದರ್ಶಿಸಿದ ಪ್ರತಿಭಟನಾಕಾರರು ಕೆಲ ಕಾಲ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಇದರಿಂದ ಕೆಂಪೇಗೌಡ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತು. ರಸ್ತೆತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ಪೊಲೀಸರು ಬಂಧಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
@12bc = ವಾಗ್ದಾಳಿ
ಇದಕ್ಕೂ ಮೊದಲು ಧರಣಿನಿರತ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಸಂಸದೆ ಶೋಭಾಕರಂದ್ಲಾಜೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ವೋಟ್‌ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಮುಸ್ಲಿಂರನ್ನು ಓಲೈಸಲು ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ಉಗ್ರಗಾಮಿಗಳು ಎಂದು ಕರೆದಿದ್ದಾರೆ. ಇದಕ್ಕಾಗಿ ಸಿದ್ಧರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆಗಳಾಗುತ್ತವೆ. ಕೇರಳ ಮಾದರಿಯಲ್ಲಿ ಕೊಲೆಗಳು ನಡೆಯುತ್ತಿವೆ. ಈಗಾಗಲೇ ಕೇರಳದಲ್ಲಿ ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆದಿರುವಂತೆ ರಾಜ್ಯದಲ್ಲೂ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಆಗ್ರಹಿಸಿದರು.
@h18 = ಉಗ್ರವಾದಕ್ಕೆ ಕಾಂಗ್ರೆಸ್‌ ಕುಮ್ಮಕ್ಕು
ದೇಶದಲ್ಲಿ ಉಗ್ರವಾದವನ್ನು ಬೆಳೆಸಿದ್ದೆ ಕಾಂಗ್ರೆಸ್. ಇಂತಹ ಕಾಂಗ್ರೆಸ್ ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ದೂರುತ್ತಿರುವುದು ಅರ್ಥವಿಲ್ಲದ್ದು ಎಂದು ಅವರು ಹರಿಹಾಯ್ದರು.
ಪ್ರತಿಭಟನೆಯಲ್ಲಿ ಶಾಸಕರುಗಳಾದ ವಿಜಯಕುಮಾರ್, ಡಾ. ಅಶ್ವತ್ಥ್‌ನಾರಾಯಣ, ಮಾಜಿ ಶಾಸಕ ನಂದೀಶ್‌ರೆಡ್ಡಿ, ಮಾಜಿ ಮೇಯರ್ ನಟರಾಜ್, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಮುಖಂಡ ಎ.ವಿ. ರವಿ ಸೇರಿದಂತೆ ಬಿಬಿಎಂಪಿಯ ಹಲವು ನಗರಪಾಲಿಕೆ ಸದಸ್ಯರು, ಮಾಜಿ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

Leave a Comment