ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಹಲ್ಲೆ

ತಲೆ-ಮುಖಕ್ಕೆ ಗಂಭೀರ ಗಾಯ, ಅಲ್ಲಲ್ಲಿ ಬಲವಂತದ ಬಂದ್ , ಶಾಸಕರ ಕಾರಿಗೆ ಕಲ್ಲು ,ನೂರಕ್ಕೂ ಹೆಚ್ಚು ಮಂದಿ ಸೆರೆ

ಮಂಗಳೂರು, ಸೆ.೧೦, ಇಂಧನಗಳ ಬೆಲೆಯೇರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನೀಡಿರುವ ಬಂದ್ ಕರೆಗೆ ದಕ-ಉಡುಪಿ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗಿನಿಂದಲೇ ಖಾಸಗಿ ಹಾಗೂ ಸರಕಾರಿ ಬಸ್‌ಗಳು ರಸ್ತೆಗಿಳಿಯದೇ ಇರುವ ಕಾರಣ ಜನಸಂಚಾರ ವಿರಳವಾಗಿತ್ತು. ಮಂಗಳೂರಲ್ಲಿ ಬಲವಂತದ ಬಂದ್ ನಡೆಸಿದ ನೂರಕ್ಕೂ ಅಧಿಕ ಕಾಂಗ್ರೆಸ್-ಜೆಡಿಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರೆ, ಉಡುಪಿಯ ಬನ್ನಂಜೆ ಎಸ್‌ಪಿ ಕಚೇರಿ ಮುಂಭಾಗ ಬಲವಂತದ ಬಂದ್ ನಡೆಸುತ್ತಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಕಾರ್ಯಕರ್ತರು ವಿರೋಧಿಸಿದ್ದು ಈ ವೇಳೆ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ಎಂಬವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆಗೈದಿದೆ. ತಲೆ, ಮುಖದ ಭಾಗಕ್ಕೆ ಗಂಭೀರ ಗಾಯಗೊಂಡಿರುವ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆಯ ನೇತೃತ್ವ ನಡೆಸಿದ್ದ ಕಾಂಗ್ರೆಸ್ ಮುಖಂಡ ವಿಜಯ್ ಪೂಜಾರಿ ಹಾಗೂ ರಮೇಶ್ ಕಾಂಚನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಕ್ ಸಂಚರಿಸುತ್ತಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆದಿದೆ. ಶಾಸಕರು ಬಂಟ್ವಾಳದಿಂದ ಕಲ್ಲಡ್ಕಕ್ಕೆ ತೆರಳುತ್ತಿದ್ದ ವೇಳೆ ಬೋಳಂಗಡಿ ಸಮೀಪ ಘಟನೆ ನಡೆದಿದೆ. ಶಾಸಕರಿದ್ದ ಕಾರು ಬೋಳಂಗಡಿ ತಲುಪುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಶಾಸಕ ರಾಜೇಶ್ ನಾಕ್ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಮಂಗಳೂರಿನ ಕದ್ರಿ ಬಳಿ ಗುಂಪೊಂದು ಹೋಟೆಲ್‌ಗೆ ಕಲ್ಲೆಸೆದರೆ, ಬಿಸಿ ರೋಡ್ ಬಳಿ ಬೆಂಗಳೂರಿನಿಂದ ಮರಳುತ್ತಿದ್ದ ಖಾಸಗಿ ಬಸ್, ಸರಕಾರಿ ಬಸ್‌ಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಸುರತ್ಕಲ್, ಮೂಲ್ಕಿ, ಕಿನ್ನಿಗೋಳಿ, ಮಂಗಳೂರು ನಗರದಲ್ಲಿ ಅಂಗಡಿಗಳು ತೆರೆದಿದ್ದು, ಹೋಟೆಲ್, ಶೋರೂಂಗಳು ಎಂದಿನಂತೆ ವ್ಯವಹಾರ ನಡೆಸುತ್ತಿವೆ.

ಮಂಗಳೂರಿನ ಜ್ಯೋತಿ ಸರ್ಕಲ್ ಬಳಿ ಖಾಸಗಿ ಬಸ್ಸೊಂದಕ್ಕೆ ಹಾಗೂ ಬಂಟ್ವಾಳದಲ್ಲಿ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ನಸುಕಿನ ಜಾವ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಈ ನಡುವೆ ಮಂಗಳೂರಿನ ಪಂಪ್‌ವೆಲ್, ಜ್ಯೋತಿ ಸರ್ಕಲ್, ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿಸಿರೋಡ್, ಮಾಣಿ, ತುಂಬೆ, ಜಕ್ರಿಬೆಟ್ಟು ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ಬಂದ್ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದಾರೆ. ಮಂಗಳೂರಿನಲ್ಲಿ ಖಾಸಗಿ ಮತ್ತು ಸರಕಾರಿ ಬಸ್‌ಗಳೆಲ್ಲ ನಿಲ್ದಾಣಗಳಲ್ಲಿ ಠಿಕಾಣಿ ಹೂಡಿವೆ. ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ರಸ್ತೆ ತಡೆಗೆ ಮುಂದಾದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳ್ತಂಗಡಿಯಲ್ಲೂ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಸಿರೋಡ್ ಮುಖ್ಯವೃತ್ತದ ಬಳಿಯಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್‌ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಇದಕ್ಕೂ ಮೊದಲು ಮುಂಜಾನೆ ೫:೩೦ರ ವೇಳೆಗೆ ಬಂಟ್ವಾಳದಲ್ಲಿ ಇನ್ನೊಂದು ಬಸ್ ಮೇಲೂ ಕಲ್ಲೆಸೆತ ನಡೆದಿದೆ. ಇದರಿಂದ ಅದರ ಗ್ಲಾಜಿಗೂ ಹಾನಿಯಾಗಿದೆ. ತುಂಬೆಯಲ್ಲಿ ಟೈರ್‌ಗೆ ಬೆಂಕಿ ಹಾಕಿ ರಸ್ತೆ ತಡೆ ಮಾಡಿದ್ದನ್ನು ಪೊಲೀಸರು ತೆರವು ಮಾಡಿದ್ದಾರೆ. ಮಾಣಿ ಸಮೀಪದ ಹಳೀರ ಎಂಬಲ್ಲಿ ರಸ್ತೆ ಮಧ್ಯೆ ಕಿಡಿಗೇಡಿಗಳು ಟೈರ್ ಸುಟ್ಟು ಹಾಕಿದ ಘಟನೆ ನಡೆದಿದೆ. ಕಲ್ಲಡ್ಕ ಕೆಸಿ ರೋಡ್, ಮಾಣಿ ನಾರಾಯಣ ಗುರು ಮಂದಿರ ಬಳಿಯ ರಸ್ತೆಯಲ್ಲಿ ಬಂದ್ ಬೆಂಬಲಿಗರು ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಸಕಾಲಿಕವಾಗಿ ಆಗಮಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಟೈರ್ ಬದಿಗೆ ಸರಿಸಿ ಬೆಂಕಿ ನಂದಿಸಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಕಲ್ಲಡ್ಕ ಸಹಿತ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಿಕ್ಷಾ, ಟ್ಯಾಕ್ಸಿ ಸಂಚಾರ ಎಂದಿನಂತೆಯೇ ಇದೆ. ಎಎಸ್‌ಪಿ ಋಷಿಕೇಷ್ ಸೋನಾವಣೆ, ವ್ರತ್ತ ನಿರೀಕ್ಷಕ ಟಿಡಿ ನಾಗರಾಜ್, ಡಿಸಿಐಬಿ ಇನ್‌ಸ್ಪೆಕ್ಟರ್ ಸುನೀಲ್ ನಾಯಕ್, ಬಂಟ್ವಾಳ ನಗರ ಠಾಣಾ ಎಸ್‌ಐ ಚಂದ್ರಶೇಖರ್, ಮಡಿಕೇರಿ ಎಸ್.ಐ.ರಕ್ಷಿತ್ ಗೌಡ, ಮತ್ತಿತರರು ಕಲ್ಲಡ್ಕ ಸಹಿತ ಇತರ ಆಯಕಟ್ಟಿನ ಸ್ಥಳಗಳಿಗೆ ಬೇಟಿ ನೀಡಿದರು.

ಶಾಸಕರ ಕಾರನ್ನು ಬೆನ್ನಟ್ಟಿದ ಕಾರ್ಯಕರ್ತರು

ಭಾರತ್ ಬಂದ್ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲವಾಗುವಂತೆ ಬೈಕ್-ಕಾರ್ ಉಚಿತ ಡ್ರಾಪ್ ಸೇವೆಯನ್ನು ಮಂಗಳೂರು ದಕ್ಷಿಣ ಶಾಸಕ ಡಿ ವೇದ್ಯವಾಸ್ ಕಾಮತ್ ಒದಗಿಸಿದ್ದರು. ಬೆಳಗ್ಗಿನಿಂದಲೇ ನಗರದ ಜನತೆ ಶಾಸಕರ ಸೇವೆಗೆ ಸ್ಪಂದಿಸಿದ್ದು ಉಚಿತ ಸಂಚಾರಿ ಸೇವೆಯನ್ನು ಬಳಕೆ ಮಾಡುತ್ತಿದ್ದರು. ನಗರದ ಜ್ಯೋತಿ ವೃತ್ತದ ಬಳಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರ ಕಾರನ್ನು ಕಾಂಗ್ರೆಸ್ ಕಾರ್ಯಕರ್ತರು ಬೆನ್ನಟ್ಟಿ ಹೋಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ನೋಡಿ ಕಾರ್ ನಿಲ್ಲಿಸಿದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಕಾರಿನಿಂದ ಇಳಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಬಲವಂತದ ಬಂದ್ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಅಸಮಾಧಾನ ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆ, ಬಸ್ ಇಲ್ಲದ ಕಾರಣ, ಪ್ರಯಾಣಿಕರು ಆಟೋ ಹತ್ತಿದ್ದಕ್ಕೆ, ಪ್ರಯಾಣಿಕರನ್ನು ಆಟೋದಿಂದ ಇಳಿಸಿದ್ದಕ್ಕಾಗಿ, ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಕಮಿಷನರ್ ಜೊತೆ ಮಾತಿನ ಚಕಮಕಿ ನಡೆದು ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ನಗರದ ಬೆಂದೂರುವೆಲ್‌ನಲ್ಲಿರುವ ಜೆಡಿಎಸ್ ಪಕ್ಷದ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ಮಾಡಿದ್ದಕ್ಕೆ ೫೦ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಂಗಡಿಗಳನ್ನು ಮುಚ್ಚಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಎದುರೇ ಗೂಂಡಾಗಿರಿ ನಡೆಸಿರುವ ಘಟನೆ ನಡೆದಿದೆ. ಮೆಡಿಕಲ್ ಮುಚ್ಚಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರಿಂದ ಲಾಠಿ ಹಿಡಿದು ಚದುರಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಂಕನಾಡಿ ಬೆಂದೂರುವೆಲ್ ರಸ್ತೆಯಲ್ಲಿ ರಸ್ತೆ ತಡೆದು ಮೆರವಣಿಗೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ
ಬಂಟ್ವಾಳ ತಾಲೂಕಿನ ಬರಿಮಾರು ನಿವಾಸಿ ಅರುಣ್ ಎಂಬವರ ಮೇಲೆ ದುಷ್ಕರ್ಮಿಗಳು ಹಲ್ಲೆಗೈದ ಘಟನೆ ಇಂದು ಬೆಳಗ್ಗೆ ನಡೆದಿದೆ. ಬಿಜೆಪಿ ಕಾರ್ಯಕರ್ತರಾಗಿರುವ ಅರುಣ್ ತಮ್ಮ ಪಿಕ್‌ಅಪ್ ಅನ್ನು ಬಾಡಿಗೆಗೆಂದು ಮಾಣಿ ಜಂಕ್ಷನ್ ನಿಲ್ಲಿಸಿದ್ದರು. ಭಾರತ್ ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರೌಡಿಶೀಟರ್ ಜಗದೀಶ್ ಜೈನ್ ಮತ್ತು ತಂಡ ಅರುಣ್‌ರಲ್ಲಿ ಬಾಡಿಗೆ ಮಾಡಬೇಡ ಎಂದು ಬೆದರಿಸಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಅರುಣ್‌ರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment