ಬಿಜೆಪಿ ಜನರ ಜೊತೆ ಚೆಲ್ಲಾಟವಾಡುತ್ತಿದೆ : ವಿ.ಎಸ್.ಉಗ್ರಪ್ಪ

ಬೆಂಗಳೂರು, ಆ 13 – ರಾಜ್ಯದಲ್ಲಿ ಸರ್ಕಾರವೂ ಇಲ್ಲ, ಕೇಂದ್ರಕ್ಕೆ ರಾಜ್ಯ ಜನರ ಸಂಕಷ್ಟಗಳು ಬೇಕಿಲ್ಲ, ಬಿಜೆಪಿ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಆರೋಪಿಸಿದ್ದಾರೆ

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಮಮಾರ್ಗದಲ್ಲಿ ಸರ್ಕಾರ ರಚನೆ ಮಾಡಲಾಗಿದೆ. ಸರ್ಕಾರ ರಚನೆಯಾಗಿ 18 ದಿನಗಳೂ ಕಳೆದರೂ ಇನ್ನೂ ಮಂತ್ರಿಮಂಡಲ ರಚನೆಯೇ ಆಗಿಲ್ಲದೇ ಇರುವುದು ರಾಜ್ಯದ ಇತಿಹಾಸದಲ್ಲಿಯೇ ಮೊದಲು. ಮಂತ್ರಿಗಳೇ ಇಲ್ಲದೇ  ಜನರ ಬವಣೆ ನೀಗಿಸಲು ಸಾಧ್ಯವಿಲ್ಲ ಎಂದರು.

ಕೇಂದ್ರ ಬಿಜೆಪಿ ಮೈತ್ರಿ ಪಕ್ಷಗಳ ಶಾಸಕರನ್ನು ಖರೀದಿಸಲು ನೂರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ. ಆದರೆ ಜನರ ಸಂಕಷ್ಟ ನೀಗಿಸಲು ಮಾತ್ರ ಹಣ ನೀಡುವುದಿಲ್ಲ. ವಿಶ್ವಾಸಮತ ಯಾಚನೆಗೆ ಮೈತ್ರಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದ ರಾಜ್ಯಪಾಲರು ಈಗ ಎಲ್ಲಿದ್ದಾರೆ? ಪಕ್ಷಗಳು ಅಧಿಕಾರಕ್ಕೆ ಬರುತ್ತವೆ ಹೋಗುತ್ತವೆ. ಆದರೆ ರಾಜ್ಯದ ಜನರಿಗೆ ತೊಂದರೆಯಾಗಬಾರದು. ಯಾರೂ ಸಹ

ಜನರ ಬದುಕಿನ ಜೊತೆ ರಾಜಕರಣ ಮಾಡಬಾರದು ಎಂದರು.

2009 ರಲ್ಲಿ ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ರಾಜ್ಯದಲ್ಲಿ ನೆರೆ ಬಂದಿತ್ತು. ಆಗಲೂ ಜನರಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ಆಗ ಸಂಗ್ರಹಿಸಿದ ಹಣ ಎಲ್ಲಿಹೋಯ್ತು. ಎಷ್ಟು ಮನೆಗಳನ್ನು ನಿರ್ಮಾಣಮಾಡಿದ್ದೀರಿ ಎಂದು ಯಡಿಯೂರಪ್ಪ ಅವರನ್ನು ಪ್ರಶ್ನಿಸಿದರು.

ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಕಂಡರೆ ಭಯ. ಹೀಗಾಗಿ ಅವರು ನೆರೆ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ. ಕೇಂದ್ರ ನಾಯಕರ ಮೇಲೆ ಭಯವಿದೆ ಎನ್ನುವುದನ್ನು ಯಡಿಯೂರಪ್ಪ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು. ನೆರೆ ಸಹಾಯಕ್ಕೆ ಸರ್ಕಾರದ ಜೊತೆ ನಾವು ಇದ್ದೇವೆ. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಒಂದು ಕಡೆ ಅತಿವೃಷ್ಟಿ, ಮತ್ತೊಂದು ಕಡೆ ಅನಾವೃಷ್ಟಿಯಿದೆ. ಚಿತ್ರದುರ್ಗ,ಪಾವಗಡ,ತುಮಕೂರು ಸೇರಿದಂತೆ ಕೆಲವೆಡೆ ನೀರಿಲ್ಲ. ಕೆಲವು ಕಡೆ ಬರದಿಂದ ಕುಡಿಯುವುದಕ್ಕೆ ನೀರು ಸಿಗುತ್ತಿಲ್ಲ.ಒಂದು ಕಡೆ ಬರ , ಮತ್ತೊಂದು ಕಡೆ ನೆರೆಯಿಂದ ರಾಜ್ಯದಲ್ಲಿ ಸಾಕಷ್ಟು ಸಂಕಷ್ಟ ಪರಿಸ್ಥಿತಿ ಉದ್ಭವಿಸಿದೆ. ರಾಜ್ಯ ಸರ್ಕಾರ ನೆರೆ, ಅತಿವೃಷ್ಟಿ ನಷ್ಟದ ಬಗ್ಗೆ ಸಮಗ್ರ ವರದಿಯನ್ನು ಕೇಂದ್ರಕ್ಕೆ ಕಳುಹಿಸಿ, 5 ಸಾವಿರ ಕೋಟಿ ಮಧ್ಯಂತರ ನಿಧಿ ನೀಡುವಂತೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ನಡಿ ರಾಷ್ಟ್ರೀಯ ವಿಪತ್ತು ಘೋಷಿಸಬೇಕು.ರಾಜ್ಯ ಸರ್ಕಾರ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.

ಪ್ರವಾಹದಿಂದ 48 ಜನ ಸಾವನ್ನಪ್ಪಿದ್ದು, 12 ಮಂದಿ ಕಾಣೆಯಾಗಿದ್ದಾರೆ. ಸಾವಿವಾರು ಜಾನುವಾರುಗಳು ಮೃತಪಟ್ಟಿವೆ.ರಾಜ್ಯದಲ್ಲಿ 1 ಲಕ್ಷ ಕೋಟಿ ಆಸ್ತಿಪಾಸ್ತಿ ನಷ್ಟವಾಗಿದೆ. ಸೇತುವೆ,ರಸ್ತೆಗಳು ಮುಚ್ಚಿಹೋಗಿವೆ.

ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದೆ. ಇಷ್ಟೆಲ್ಲಾ ಅನಾಹುತಗಳಾದರೂ ರಾಜ್ಯ ಸರ್ಕಾರ ಇನ್ನೂ ನಿದ್ರಾವಸ್ಥೆತಯಲ್ಲಿಯೇ ಇದೆ ಎಂದು ಟೀಕಿಸಿದರು.

ರಾಜ್ಯದಲ್ಲಿನ ಹಾನಿ ಕಂಡು, ಕೇಳಿಯೂ ಕೇಂದ್ರ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿರುವಂತೆ ನಟಿಸುತ್ತಿದೆ. ಪ್ರವಾಹದಿಂದಾಗಿರುವ ನಷ್ಟದ ಬಗ್ಗೆ ಸರ್ಕಾರಕ್ಕೆ ಸರಿಯಾದ ಮಾಹಿತಿಯಿಲ್ಲ. ಕೇಂದ್ರ ಸರ್ಕಾರಕ್ಕೆ ಸಮಗ್ರ ಮಾಹಿತಿ ನೀಡಿಲ್ಲ. ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ನಿಜವಾಗಿಯೂ ಕಳಕಳಿ ಇರುವುದೇ ಆದಲ್ಲಿ  ಅವರು ಕೂಡಲೇ ರಾಜ್ಯಕ್ಕೆ ಭೇಟಿ ಕೊಡಬೇಕು. ಮುಖ್ಯಮಂತ್ರಿಗಳು ಸರ್ವಪಕ್ಷಗಳ ಸಭೆ ಕರೆದು, ಸಭೆಯ ವರದಿಯನ್ನು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೂಡಲೇ ಕೊಂಡೊಯ್ಯುವಂತೆ ಒತ್ತಾಯಿಸುವುದಾಗಿ ಅವರು ಹೇಳಿದರು.

ಸಚಿವರೇ ಇಲ್ಲದ ಸರ್ಕಾರದಲ್ಲಿ  ಯಡಿಯೂರಪ್ಪ ಒಬ್ಬರೇ ಪ್ರವಾಹಪೀಡಿತ ಪ್ರದೇಶಗಳಲ್ಲಿ ಓಡಾಡಿದ ಮಾತ್ರಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ. ಯಡಿಯೂರಪ್ಪ ಅವರದ್ದು ‘ಒನ್ ಮ್ಯಾನ್ ಷೋ’ ಎಂದು ಅವರು ವ್ಯಂಗ್ಯವಾಡಿದರು.

ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಒತ್ತಡ ಹೇರುತ್ತಿದ್ದ ರಾಜ್ಯಾಪಾಲ ವಜೂಭಾಯಿ ವಾಲಾ , ಸಚಿವ ಸಂಪುಟ ರಚನೆ ಆಗಿರದೇ ಇರುವುದನ್ನು ಕಂಡು ಏಕೆ ಸುಮ್ಮನಿದ್ದಾರೆ. ಮಂತ್ರಿಮಂಡಲವಿಲ್ಲದೆ ಇರುವುದು ಒಂದು ಸರ್ಕಾರವೇ ? ಮಂತ್ರಿಗಳಿಲ್ಲದೇ ಸರ್ಕಾರ ನಡೆಸುವುದು ಕಾನೂನು ಬಾಹಿರ. ದೇಶದ ಇತಿಹಾಸದಲ್ಲಿ ಈ ರೀತಿ ನಡೆದಿರಲಿಲ್ಲ.  ಸಚಿವ ಸಂಪುಟವಿಲ್ಲದ ಸರ್ಕಾರವನ್ನು ವಿಸರ್ಜಿಸಿ ಎಂದು ರಾಜ್ಯಪಾಲರಿಗೆ ಉಗ್ರಪ್ಪ ಒತ್ತಾಯಿಸಿದರು.

ಮುಖ್ಯಮಂತ್ರಿ ನೆರೆ ಪ್ರದೇಶಗಳಿಗೆ ಹೋಗಬೇಕಾಗಿರುವುದು ಅವರ ಕರ್ತವ್ಯ.  ಅದನ್ನು ಅವರು ಮಾಡುತ್ತಿದ್ದಾರೆ ಇದರಲ್ಲಿ ಹೆಚ್ಚು ವಿಶೇಷವೇನಿಲ್ಲ.ಆದರೆ ಯಡಿಯೂರಪ್ಪ ಅವರಿಗಿನ್ನೂ ನೆರೆ, ಅತಿವೃಷ್ಟಿಯಿಂದ ಎಷ್ಟು ನಷ್ಟ ಆಗಿದೆ ಎಂಬ ಅರಿವಾಗಲಿ ಅಂದಾಜಾಗಲಿ ಇಲ್ಲ. ಸಂಕಷ್ಟದಲ್ಲಿ ಜನ ಕೇಳಿದರೂ ಕೇಳದೇ ಇದ್ದರೂ ಸಹಾಯ ಮಾಡುತ್ತಾರೆ. ಯಡಿಯೂರಪ್ಪ ಪದೇ ಪದೇ ಸಾರ್ವಜನಿಕರಿಗೆ ಸಹಾಯ ಕೇಳುವುದನ್ನು ಬಿಟ್ಟು ಕೇಂದ್ರಕ್ಕೆ ಅನುದಾನ ಕೇಳಲಿ. ರಾಜ್ಯದಿಂದ ಸಂಸತ್ತಿಗೆ ಆರಿಸಿಹೋಗಿರುವ 26 ಬಿಜೆಪಿ ಸಂಸದರು ಏನು ಮಾಡುತ್ತಿದ್ದಾರೆ? ಅವರೇಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ. ಗುಜರಾತ್, ಮಹಾರಾಷ್ಟ್ರ ತಮಿಳುನಾಡಿಗೆ ವಿಶೇಷ ಅನುದಾನ ನೀಡುವ ಕೇಂದ್ರ , ಕರ್ನಾಟಕಕ್ಕೆ ಏಕೆ ಗಮನ ನೀಡುತ್ತಿಲ್ಲ.  ಅನುದಾನ ನೀಡಲು ತಾರತಮ್ಯ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಕ್ರೀದ್ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅವರ ಬಕ್ರೀದ್ ಔತಣಕೂಟದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದನ್ನು ದೊಡ್ಡ ವಿಚಾರವೆನ್ನುವಂತೆ ಬಿಂಬಿಸಲಾಗಿದೆ. ಊಟಕ್ಕೆ ಕರೆದಾಗ ಹೋಗುವುದು ವಾಡಿಕೆ.  ಹಬ್ಬಕ್ಕೆ ಹೋಗಿದ್ದು ಬಿಟ್ಟರೆ ಬಿರಿಯಾನಿ ಬಡಿಸುತ್ತಾರೆ ಎಂದು ಯಾರೂ ಹೋಗಿರಲಿಲ್ಲ. ಕೆಲವರು ಬಿರಿಯಾನಿ ತಿಂದಿದ್ದಾರೆ ಇನ್ನು ಕೆಲವು ತಿಂದಿಲ್ಲ. ಇದನ್ನೇ ದೊಡ್ಡದ್ದಾಗಿ ಬಿಂಬಿಸಿರುವುದು ಸರಿಯಲ್ಲ ಎಂದು ಉಗ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧಪಕ್ಷವಾಗಿ ಕಾಂಗ್ರೆಸ್, ನೆರೆ ಸಂತ್ರಸ್ಥರಿಗೆ ಬೇಕಾದ ಸಹಕಾರ ನೀಡಿದೆ ಮತ್ತು ನೀಡುತ್ತಿದೆ.  ತಾಲೂಕುಗಳಲ್ಲಿ ಪಕ್ಷದ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ. 87 ಲಕ್ಷ ರೂ.ಗಳನ್ನು  ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸರ್ಕಾರದ ಪರಿಹಾರ ನಿಧಿಗೆ ನೀಡಲಾಗಿದೆ. ಪಕ್ಷದ ಶಾಸಕರು, ಸಂಸದರು ತಮ್ಮ ಒಂದು ತಿಂಗಳ ಸಂಬಳ ನೆರೆ ಸಂತ್ರಸ್ಥರಿಗೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್, ಮುಖಂಡ ಡಿ.ಕೆ.ಶಿವಕುಮಾರ್ ಸೇರಿದಂತೆ ನಾಯಕರ ತಂಡ ಹಲವು ಭಾಗಗಳಲ್ಲಿ ನೆರೆ ಪ್ರವಾಸ ಅಧ್ಯಯನ ನಡೆಸಿ ಜನರಿಗೆ ಸ್ಪಂದಿಸುತ್ತಿದೆ. ಎಲ್ಲವನ್ನೂ ಮಾಧ್ಯಮಗಳಿಗೆ ಹೇಳಿ, ತೋರಿಸಿ ಮಾಡಲಾಗುವುದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಮಾತನಾಡಿ, ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಪರಿಹಾರ ಕೇಂದ್ರಗಳಿಗೆ ಸರ್ಕಾರ ಒಂದು ಪೈಸೆಯನ್ನೂ ಕೊಟ್ಟಿಲ್ಲ.ಕಾಂಗ್ರೆಸ್ ಪಕ್ಷದಿಂದ ಕೋಟಿ ರೂಪಾಯಿ ವೆಚ್ಚದಲ್ಲಿ ಬಟ್ಟೆ, ಆಹಾರ, ದಿನಸಿ ಕೊಡಲಾಗಿದೆಸರ್ಕಾರ ನೆರೆ ಪರಿಹಾರದಲ್ಲಿಯೂ  ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

Leave a Comment