ಬಿಜೆಪಿ ಅಹೋರಾತ್ರಿ ಧರಣಿ ಆರಂಭ

ಬೆಂಗಳೂರು, ಜೂ. ೧೪- ಬರಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ, ಜಿಂದಾಲ್ ಕಂಪೆನಿಗೆ ಸಾವಿರಾರು ಎಕರೆ ಭೂಮಿಯನ್ನು ಪರಭಾರೆ ಮಾಡಿರುವ ಹಿಂದೆ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಹಾಗೂ ಸಾಲಮನ್ನಾ ಗೊಂದಲಗಳ ಪರಿಹರಿಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ನಗರದಲ್ಲಿ ಇಂದಿನಿಂದ 2 ದಿನಗಳ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಈ ಆಹೋರಾತ್ರಿ ಧರಣಿ ನಡೆದಿದ್ದು, ಪಕ್ಷದ ನಾಯಕರುಗಳಾದ ಬಸವರಾಜಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಗೋವಿಂದರಕಾರಜೋಳ, ಬಿ. ಶ್ರೀರಾಮುಲು, ಸಿ.ಎಂ. ಉದಾಸಿ, ಸಿ.ಟಿ. ರವಿ, ಶೋಭಾಕರಂದ್ಲಾಜೆ, ಎನ್.ರವಿಕುಮಾರ್ ಸೇರಿದಂತೆ ಪ್ರಮುಖ ಮುಖಂಡರುಗಳು, ಬಿಜೆಪಿಯ ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಹಾಗೂ ವಿಧಾನಪರಿಷತ್ ಸದಸ್ಯರುಗಳು ಈ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಇಂದು ಮತ್ತು ನಾಳೆ ಎರಡು ದಿನ ಈ ಅಹೋರಾತ್ರಿ ಧರಣಿ ನಡೆಯಲಿದೆ.
ನಗರದ ಶೇಷಾದ್ರಿ ರಸ್ತೆಯ ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿಯ ಈ ಆಹೋರಾತ್ರಿ ಧರಣಿ ನಡೆದಿದ್ದು, ಎಲ್ಲ ಮುಖಂಡರುಗಳು ರಾತ್ರಿ ಇಡೀ ಧರಣಿ ನಡೆಸುವರು.
ಯಡಿಯೂರಪ್ಪ ವಾಗ್ದಾಳಿ
ಜಿಂದಾಲ್‌ ಕಂಪೆನಿಗೆ ಕಬ್ಬಿಣದ ಅದಿರಿರುವ ಸಾವಿರಾರು ಎಕರೆ ಭೂಮಿ ಮಾರಾಟಕ್ಕೆ ಸರ್ಕಾರ ಮುಂದಾಗಿರುವುದನ್ನು ಟೀಕಿಸಿದ ಅವರು, ಈ ಜಮೀನು ಪರಭಾರೆಯಲ್ಲಿ ಜಿಂದಾಲ್‌ನಿಂದ ಸರ್ಕಾರಕ್ಕೆ ಕಿಕ್‌ಬ್ಯಾಕ್ ಬಂದಿದೆ ಎಂದು ಆರೋಪಿಸಿ, ಕೂಡಲೇ ಜಮೀನು ಪರಭಾರೆ ಮಾಡುವ ತೀರ್ಮಾನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ರಾಜ್ಯದಲ್ಲಿ ಬರ ಪ್ರವಾಸ ಮಾಡದಿದ್ದರೆ ಸಾಲಮನ್ನಾ ಚುಕ್ತಾ ಮಾಡುವ ಬಗ್ಗೆ ಸರ್ಕಾರ ಚಕಾರ ಎತ್ತುತ್ತಿರಲಿಲ್ಲ. ಬಿಜೆಪಿಯ ಹೋರಾಟದಿಂದ ಸಾಲಮನ್ನಾ ಚುಕ್ತಾ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಅವರು ಹೇಳಿದರು.
ಕಳೆದ ಒಂದು ವರ್ಷದಿಂದ ಕುಮಾರಸ್ವಾಮಿ ಸರ್ಕಾರ ರೈತರ 5-6 ಸಾವಿರ ಕೋಟಿ ರೂ.ಗಳನ್ನು ಮನ್ನಾ ಮಾಡಿಲ್ಲ. ಸಾಲಮನ್ನಾದ ಬಗ್ಗೆ ಬರೀ ಮಾತನಾಡುತ್ತಿದ್ದಾರೆ ಎಂದು ದೂರಿದರು.
ರೈತರ ಸಾಲಮನ್ನಾ 45 ಸಾವಿರ ಕೋಟಿ ಅಲ್ಲ, 15-16 ಸಾವಿರ ಕೋಟಿ ರೂ. ಅಷ್ಟೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಹಿಂದೆ 45 ಸಾವಿರ ಕೋಟಿ ರೂ. ಸಾಲ ಇದೆ ಎಂದು ಹೇಳಿದ್ದು ಏಕೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
 ಸರ್ವ ಪಕ್ಷ ಸಭೆ ಆಗ್ರಹ
ರೈತರ ಸಾಲಮನ್ನಾ ಎಷ್ಟಿದೆ ಎಂಬ ಬಗ್ಗೆ ಸರ್ವ ಪಕ್ಷ ಸಭೆ ಕರೆದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರೋಧ ಪಕ್ಷಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಂಚತಾರಾ ಹೋಟೆಲ್ ವಾಸ್ತವ್ಯದ ಬಗ್ಗೆ ಕಿಡಿಕಾರಿದ ಅವರು, ಕಳೆದ ಒಂದು ವರ್ಷದಿಂದ ತಾಜ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು ತಾಜ್ ಹೋಟೆಲ್‌ಗೆ ಜನಸಾಮಾನ್ಯರು ಬರಲು ಆಗುವುದಿಲ್ಲ ಕಮಿಷನ್ ಕೊಡುವರು ಬರುತ್ತಾರೆ ಎಂದು ವ್ಯಂಗ್ಯವಾಡಿದರು.
ಈಗ ಮುಖ್ಯಮಂತ್ರಿ ಕುರ್ಚಿ ಅಲ್ಲಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಎಚ್ಚರಿಸಿದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಪಂಚತಾರಾ ಹೋಟೆಲ್ ಬಿಟ್ಟು ಮನೆಗೆ ಶಿಫ್ಟಾಗಿದ್ದಾರೆ. ಒಂದು ವರ್ಷದಿಂದ ಜನ ಸಾಮಾನ್ಯರ ಕೈಗೆ ಅವರು ಸಿಕ್ಕಿದ್ದರಾ ಎಂದು ಯಡಿಯೂಪ್ಪ ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜನರ ಕಷ್ಟ ಕೇಳುವರಿಲ್ಲ. ಈ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದು ವಾಗ್ದಾಳಿ ನಡೆಸಿದರು.
 ಮಾರಾಟಗಾರರ ಸರ್ಕಾರ
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ, ರಾಜ್ಯದಲ್ಲಿ ಮಾರಾಟಗಾರರ ಸರ್ಕಾರವಿದೆ. ಕಮಿಷನ್ ಸಿಕ್ಕರೆ ವಿಧಾನಸೌಧವನ್ನೇ ಮಾರಿ ಬಿಡುತ್ತಾರೆ. ಜಿಂದಾಲ್ ಭೂಮಿ ನಿರ್ಧಾರ ವಾಪಸ್ ಪ‌ಡೆಯುವ ಹೋರಾಟ ನಿಲ್ಲಲ್ಲ ಎಂದರು.
ಸಚಿವ ಜಮೀರ್ ಅಹಮದ್ ಖಾನ್ ಮತ್ತು ರೋಷನ್ ಬೇಗ್ ಇಬ್ಬರು ಮೈತ್ರಿ ಪಕ್ಷದ ಕಳ್ಳೆತ್ತುಗಳು. ಐಎಂಎ ವಂಚನೆ ಪ್ರಕರಣದಲ್ಲಿ ಇವರಿಬ್ಬರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರೋಷನ್‌ಬೇಗ್ ಅವರಿಗೆ ಎಸ್ಐಟಿಗೆ ಹೋಗಿ ಹೇಳಿ ಎಂದು ಹೇಳುತ್ತಾರೆ. ಆದರೆ, ಜಮೀರ್‌ಗೆ ಏಕೆ ಹೇಳಲ್ಲ. ಇವರಿಬ್ಬರಿಗೆ ಬೆಂಡೆತ್ತಿದರೆ ಸತ್ಯ ಹೊರಗೆ ಬರುತ್ತದೆ ಎಂದು ಈಶ್ವರಪ್ಪ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಇನ್ನೊಂದು ವಾರಕ್ಕೆ ಈ ಸರ್ಕಾರ ಬೀಳುತ್ತದೆ ಆಗ ಸಚಿವರಾಗಿರುವ ಪಕ್ಷೇತರರು ಇವರ ಜತೆ ಇರಲ್ಲ ಎಂದು ಹೇಳಿದರು.
ಎಲ್ಲಿದ್ದೀಯಪ್ಪಾ ತಾಜ್ ಹೋಟೆಲ್ ಕುಮಾರಸ್ವಾಮಿ, ಎಲ್ಲಿದ್ದೀಯಪ್ಪಾ ಸಿದ್ಧರಾಮಯ್ಯ ಎಂದು ಪ್ರತಿಭಟನಾನಿರತ ಬಿಜೆಪಿ ಮುಖಂಡರು ಮುಗಿಲು ಮುಟ್ಟುವಂತೆ ಘೋಷಣೆ ಕೂಗಿ, ಸರ್ಕಾರದ ಧಿಕ್ಕಾರದ ಘೋಷಣೆಗಳನ್ನು ಹಾಕಿದರು.
 ಗಾಂಧಿ ಪ್ರತಿಮೆಗೆ ಮಾಲಾರ್ಪಣೆ
ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೊದಲು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಹಾತ್ಮಗಾಂಧಿ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

Leave a Comment