ಬಿಜೆಪಿಯೇತರ ನಾಯಕರ ಮನೆಗಳ ಮೇಲೆ ಮಾತ್ರವೇ ಆದಾಯ ತೆರಿಗೆ ದಾಳಿ ಏಕೆ?- ಸಿದ್ಧರಾಮಯ್ಯ ಪ್ರಶ್ನೆ

ಮೈಸೂರು,ಏ 16-  ರಾಜ್ಯದ  ಬಿಜೆಪಿಯೇತರ ನಾಯಕರಿಗೆ ಸೇರಿದ ಮನೆ ಮತ್ತಿತರ ಸ್ಥಳಗಳ ಮೇಲೆ ಮಾತ್ರ  ಆದಾಯ ತೆರಿಗೆ ದಾಳಿಗಳು ಏಕೆ ನಡೆಯುತ್ತಿವೆ ಎಂದು  ಪ್ರಶ್ನಿಸಿರುವ  ಮಾಜಿ ಮುಖ್ಯಮಂತ್ರಿ,  ಕಾಂಗ್ರೆಸ್- ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ,  ಚುನಾವಣೆಯ ಸಂದರ್ಭದಲ್ಲಿ   ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಗುರಿಯಾಗಿಸಿ  ದಾಳಿ  ನಡೆಸುತ್ತಿರುವ  ಕೇಂದ್ರ  ಸರ್ಕಾರ ವಿರುದ್ದ  ತೀವ್ರ  ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಪತ್ರಕರ್ತರ ಸಂಘ ಆಯೋಜಿಸಿದ್ದ  “ಮೀಟ್ ದಿ ಪ್ರಸ್”  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ  ಅವರು, ಆದಾಯ ತೆರಿಗೆ ದಾಳಿಗಳು ರಾಜಕೀಯ ಪ್ರೇರಿತ,  ಚುನಾವಣೆಗಳನ್ನು ಮನಸ್ಸಿನಲ್ಲಿಕೊಂಡು  ಭಯ, ಭೀತಿ ನಿರ್ಮಿಸಲು ನಡೆಸುತ್ತಿರುವ ದಾಳಿಗಳಿವೆ ಎಂದು ದೂರಿದರು.   ಬಿಜೆಪಿ ಮುಖಂಡರಾದ  ಬಿ.ಎಸ್. ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸಿಟಿ ರವಿ, ಅರವಿಂದ ಲಿಂಬಾವಳಿ ಹಾಗೂ ಆರ್. ಆಶೋಕ  ಮನೆಗಳಲ್ಲಿ ಹಣ ಇಲ್ಲವೆ..? ಅವರೇನು ಪ್ರಮಾಣಿಕ, ಸತ್ಯ ಹರಿಶ್ಚಂದ್ರರೀತಿಯ  ವ್ಯಕ್ತಿಗಳೇ ಎಂದು  ಖಾರವಾಗಿ ಪ್ರಶ್ನಿಸಿದರು.

ಬಿಜೆಪಿ ನಾಯಕರು  ಏನೇ ತಿಪ್ಪರಲಾಗ ಹಾಕಿದರೂ ರಾಜ್ಯದ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಆಗುವುದಿಲ್ಲ. ಸರ್ಕಾರ ಅಸ್ಥಿರಗೊಳಿಸುವ  ತೀವ್ರ ಪ್ರಯತ್ನ  ಬಿಜೆಪಿ ನಡೆಸುತ್ತಿದೆ. ಇದರಲ್ಲಿ ಅವರು ಯಶಸ್ಸು ಖಂಡಿತ ಸಾಧಿಸಲು ಸಾಧ್ಯವಿಲ್ಲ, ಸಮ್ಮಿಶ್ರ  ಸರ್ಕಾರ  ಐದು ವರ್ಷ ಪೂರ್ಣಗೊಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ  ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಯಾವುದೇ  ಮನಸ್ತಾಪಗಳು ಇಲ್ಲ.  ಜೆಡಿಎಸ್ ಪರಮೋಚ್ಚ ನಾಯಕ ಹೆಚ್.ಡಿ. ದೇವೇಗೌಡ   ಅವರೊಂದಿಗೆ  ತಾವು ಹಲವು ಸುತ್ತಿನ ಮಾತುಕತೆ ನಡೆಸಿ  ಎಲ್ಲವನ್ನೂ ಪರಿಹರಿಸಿರುವುದಾಗಿ   ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.

ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ಮೈತ್ರಿ ಸರ್ಕಾರದ ಆಡಳಿತದ ಬಗ್ಗೆ ರಾಜ್ಯ  ಜನರ ಮೆಚ್ಚುಗೆಯಿದೆ. ಉಪಚುನಾವಣೆಯಲ್ಲಿ  ನಮ್ಮ  ಅಭ್ಯರ್ಥಿಗಳ ಗೆಲುವು ಇದಕ್ಕೆ ಅತಿದೊಡ್ಡ ಪುರಾವೆಯಾಗಿದೆ.  ಭಾರತದಲ್ಲಿ ಪ್ರಜಾಪ್ರಭುತ್ವ  ಸ್ಥಿತಿ ಗತಿ  ಏನಾಗಬಹುದು ?  ಎಂಬುದನ್ನು ಇಡೀ ಜಗತ್ತು  ಲೋಕಸಭಾ ಚುನಾವಣೆ ಫಲಿತಾಂಶವನ್ನು ತೀವ್ರ ಕುತೂಹಲದಿಂದ ಎದುರು ನೋಡುತ್ತಿದೆ ಎಂದರು

ಪ್ರಧಾನಿ ನರೇಂದ್ರ ಮೋದಿ ಅವರು   ಲೋಕಸಭಾ ಚುನಾವಣಾ ಪ್ರಚಾರ ನಡೆಸುತ್ತಿರುವ ರೀತಿಯನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ,  ದೇಶದ ಪ್ರಧಾನ ಮಂತ್ರಿಯಾಗಿ   ತಮ್ಮ ಸಾಧನೆಗಳು ಮೇಲೆ ಮತಯಾಚಿಸದೆ, ಯೋಧರ ಹೆಸರಿನಲ್ಲಿ  ಮತ ಕೊಡಿ ಎನ್ನುತ್ತಿರುವುದು ಸರಿಯಲ್ಲ. ಕಳೆದ ಐದು ವರ್ಷಗಳಲ್ಲಿ  ನರೇಂದ್ರ ಮೋದಿ ಸರ್ಕಾರ ಯಾವುದೇ ಸಾಧನೆ ಮಾಡದಿರುವ ಕಾರಣ ಯೋಧರ ಹೆಸರಿನಲ್ಲಿ ಮತಯಾಚಿಸುತ್ತಿರ ಬಹುದು ಎಂದು ಲೇವಡಿಮಾಡಿದರು. ಸರ್ಕಾರ    ಸಂವಿಧಾನಿಕ ಸ್ವಾಯತ್ತ ಸಂಸ್ಥೆಗಳಾದ  ಆರ್ ಬಿಐ, ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗವನ್ನು   ದುರುಪಯೋಗ ಪಡಿಸಿಕೊಂಡು, ಅವುಗಳ ಸ್ವಾಯತ್ತತೆ  ಕಸಿದುಕೊಂಡಿದೆ ಎಂದು ದೂರಿದರು.

ದಲಿತರು ಹಾಗೂ ಸಮಾಜದ ದುರ್ಬಲ ವರ್ಗಗಳಿಗೆ ಸಮಾನ ಹಕ್ಕುಗಳನ್ನು ಕಲ್ಪಿಸಿರುವ ದೇಶದ ಸಂವಿಧಾನ ಬದಲಿಸಬೇಕೆಂಬ ಗುಪ್ತ ಕಾರ್ಯಸೂಚಿಯನ್ನು  ಬಿಜೆಪಿ ಹೊಂದಿದೆ. ಮೀಸಲಾತಿ  ಅಗತ್ಯವನ್ನು  ಪ್ರಶ್ನಿಸಿ ಆರ್ ಎಸ್ ಎಸ್ ನಾಯಕರು ನೀಡುತ್ತಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

 

Leave a Comment