ಬಿಜೆಪಿಯಿಂದ ಮುಕ್ತ ಬಿಎಸ್‌ವೈ ಭರವಸೆ

ಚಿತ್ರದುರ್ಗ, ಮೇ ೧೯- ರಾಜ್ಯದಲ್ಲಿರುವ ಕೂಲಿಕಾರರಿಗೆ ದುಡಿಮೆ ಇಲ್ಲದೇ ಕೊರಗುವಂತೆ ಮಾಡಿರುವ ರಾಜ್ಯ ಸರ್ಕಾರ ಅವರ ಮಕ್ಕಳನ್ನು ಸಹ ಕೂಲಿಕಾರರನ್ನಾಗಿ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನಗರದ ಬೋವಿ ಕಾಲೋನಿಯ ಕೊಳಗೇರಿಯಲ್ಲಿ ಜನರಿಂದ ಅಹವಾಲನ್ನು ಸ್ವೀಕರಿಸಿ ನಂತರ ಅವರೊಂದಿಗೆ ಮಾತನಾಡಿದ ಬಿಎಸ್ ವೈ ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ ಕೂಲಿಕಾರರಿಗೆ ದುಡಿಮೆ ಇಲ್ಲದೇ ನಿತ್ಯದ ಜೀವನ ಮಾಡಲು ಸರ್ಕಾರ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಅಲ್ಲದೇ ಜನ ಜಾನುವಾರುಗಳಿಗೂ ಸಹ ಮೇವು ನೀಡಿಲ್ಲ ಇದರಿಂದ ರಾಜ್ಯದಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಹೇಳಿದರು.

ಕೊಳಗೇರಿ ನಿವಾಸಿಗಳಿಗೆ ವಾಸಿಸಲು ಮನೆ ಇಲ್ಲ ಇರುವ ಮನೆಗಳಿಗೆ ಹಕ್ಕುಪತ್ರ ಸಹ ನೀಡಿಲ್ಲ, ಕೂಲಿಕಾರರು, ಬಡವರು ಬಾಡಿಗೆ ಕಟ್ಟಿ ಜೀವನ ನಡೆಸುವುದು ಕಷ್ಟವಾಗಿದೆ ಎಂಬ ಸಾಕಷ್ಟು ಅಹವಾಲುಗಳು ಬಂದಿವೆ.ಈ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ರಾಜ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗುವುದು ಎಂದರು.

ಕಾಂಗ್ರೆಸ್ ಸರ್ಕಾರ ದಲಿತರನ್ನು ಸಂಪೋರ್ಣ ಕಡೆಗಣಿಸಿದೆ. ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷ ಪೂರೈಸಿದರು ಸಹ ಜನರಿಗೆ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ, ಕಾಂಗ್ರೆಸ್ ಗೆ ಅಧಿಕಾರ ನೀಡಿ ಜನರು ಕಣ್ಣೀರು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೇವಲ 7-8 ತಿಂಗಳು ಕಷ್ಟು ಅನುಭವಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಗ ನಿಮ್ಮ ಎಲ್ಲಾ ಕಷ್ಟಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಸದರಾದ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಶಾಸಕ ತಿಪ್ಪಾರೆಡ್ಡಿ, ಗೋವಿಂದ ಕಾರಜೋಳ ಮತ್ತಿತರ ಮುಖಂಡರಿದ್ದರು.
ಇದಕ್ಕೂ ಮೊದಲು ದಲಿತರ ಮನೆಗೆ ಭೇಟಿ ನೀಡಿದ ಯಡಿಯೂರಪ್ಪ ಉಪಾಹಾರ ಸೇವಿಸಿದರು.

Leave a Comment