ಬಿಜೆಪಿಯಿಂದ ಬಲಿದಾನ ದಿವಸ ಆಚರಣೆ

ದಾವಣಗೆರೆ, ಆ. 9- ಮಹಾತ್ಮಗಾಂಧೀಜಿ ಕರೆ ನೀಡಿದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಲನಕ್ಕೆ 76ನೇ ವರ್ಷ ಸಂದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಮಹಾನಗರ ಪಾಲಿಕೆ ಮುಂಭಾಗದಲ್ಲಿಂದು ಬಲಿದಾನ ದಿವಸ ಆಚರಣೆ ಮಾಡಿದರು.
1942 ಆಗಸ್ಟ್ 9 ರಂದು ಗಾಂಧೀಜಿಯವರು ಕರೆ ನೀಡಿದ್ದ ಆಂದೋಲನಕ್ಕೆ ದಾವಣಗೆರೆಯಲ್ಲೂ ಸಹ ಬ್ರಿಟಿಷರ ವಿರುದ್ದ ಪ್ರತಿಭಟಿಸಿ ಹುತಾತ್ಮರಾದ ವೀರಸ್ವಾತಂತ್ರ್ಯ ಯೋಧರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಾಗನಹಳ್ಳಿ ಹನುಮಂತಪ್ಪ ಅವರನ್ನು ಸ್ಮರಿಸಿ ಬಲಿದಾನ ದಿವಸ ಆಚರಣೆ ಮಾಡಿದರು. ಗಾಂಧೀಜಿಯವರ ಮುಂಬೈಯ ಗೋವಾಲಿಯ ಮೈದಾನದಲ್ಲಿ ಅಂದು ಕರೆ ನೀಡಿದ್ದ ಮಾಡು ಇಲ್ಲವೆ ಮಡಿ ಎಂಬ ಘೋಷವಾಕ್ಯದ ಆಂದೋಲನಕ್ಕೆ ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಪತಾಕೆ ಹಿಡಿದು ಬ್ರಿಟಿಷರ ವಿರುದ್ದ ಹೋರಾಟಗಳು ಜರುಗಿದವು. ಅಂದು ಸಹ ದಾವಣಗೆರೆಯ ಗಡಿಯಾರಕಂಬದ ಬಳಿ ಇರುವ ಹಳೇ ತಹಶೀಲ್ದಾರ್ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸ್ವಾತಂತ್ರ್ಯ ಹೋರಾಟಗಾರರು ರೈಲ್ವೆ ಕಂಬಿಗಳನ್ನು ಕಿತ್ತು ಬ್ರಿಟಿಷರ ವಿರುದ್ದ ಪ್ರತಿಭಟನೆ ನಡೆಸಿದರು. ಈ ವೇಳೆ ನಡೆದ ಗೋಲಿಬಾರ್ ನಲ್ಲಿ ಹಲವರು ಹುತಾತ್ಮರಾದರು. ಈ ಹಿನ್ನಲೆಯಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ವೀರಯೋಧರ ಸ್ಮರಣೆಯ ದಿನ ಇಂದು ಆಚರಿಸಲಾಗುತ್ತಿದೆ. ಅವರ ಸ್ಮರಣೆ ಹಾಗೂ ಬಲಿದಾನ ದಿವಸ ಆಚರಣೆ ನೆರವೇರಿಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ತಿಳಿಸಿದರು.
ಈ ವೇಳೆ ಯೋಧ ಮಂಜುನಾಥ್ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಶಿವನಗೌಡ ಟಿ ಪಾಟೀಲ್, ಟಿಂಕರ್ ಮಂಜಣ್ಣ, ಸೋಗಿಶಾಂತಕುಮಾರ್, ನವೀನ್ ಕುಮಾರ್ ಹೆಚ್.ಪಿ, ರಾಜು ನೀಲಗುಂದ, ವಿನಯಕುಮಾರ್,ಚೇತನಬಾಯಿ, ಭಾಗ್ಯ ಪಿಸಾಳೆ, ದೇವಿರಮ್ಮ, ಶ್ರೀಕಾಂತ್ ಹಾಗೂ ಕಾರ್ಯಕರ್ತರು ಇದ್ದರು.

Leave a Comment