ಬಿಜೆಪಿಯಲ್ಲಿ ಮತ್ತೆ ಭುಗಿಲೆದ್ದ ಭಿನ್ನಮತ : ಪ್ರಚಾರ ಸಮಿತಿ ಅಧ್ಯಕ್ಷತೆಯಿಂದ ಡಿವಿಎಸ್ ಎತ್ತಂಗಡಿ

ಬೆಂಗಳೂರು, ಅ. ೧೨- ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ಸದಾನಂದಗೌಡ ಅವರನ್ನು ಕೆಳಗಿಳಿಸಲಾಗಿರುವ ಕಾರಣ ಮತ್ತೊಮ್ಮೆ ಬಿಜೆಪಿ ಪಕ್ಷ ಭಿನ್ನಮತದ ಸುಳಿಗೆ ಸಿಲುಕಿದೆ.

ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ನನ್ನನ್ನು ಕೆಳಗಿಳಿಸಲು ಸಂಸದೆ ಶೋಭಾಕರಂದ್ಲಾಜೆ ಅವರು ರಾಜ್ಯಾಧ್ಯಕ್ಷರಿಗೆ ಮಾಡಿರುವ ಶಿಫಾರಸ್ಸೇ ಕಾರಣ ಎಂದು ಪರಿಗಣಿಸಿರುವ ಸದಾನಂದಗೌಡರು, ಶೋಭಾಕರಂದ್ಲಾಜೆ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.

ಸಂಸದೆ ಶೋಭಾಕರಂದ್ಲಾಜೆ ಸದಾನಂದಗೌಡ ಅವರು ಕೇಂದ್ರ ಸಚಿವರಾಗಿರುವ ಹಿನ್ನೆಲೆ ಅವರಿಗೆ ಎರಡು ಹುದ್ದೆಗಳನ್ನು ನೀಡಬಾರದು ಎಂದು ರಾಜ್ಯ ಚುನಾವಣಾ ಉಸ್ತುವಾರಿ ಹಾಗೂ ರಾಜ್ಯಾಧ್ಯಕ್ಷ ಬಿಎಸ್‌ವೈ ಅವರಲ್ಲಿ ಶೋಭಾ ಮನವಿ ಮಾಡಿದ್ದರು.

ಶೋಭಾ ಅವರ ಮನವಿಯನ್ನು ಪ್ರಕಾಶ್ ಜಾವಡೇಕರ್ ಪರಿಗಣಿಸಿರುವ ಸಾಧ್ಯತೆ ಹಿನ್ನೆಲೆ ಸದಾನಂದಗೌಡ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿದ್ದಾರೆ ಹಾಗೂ ನೂತನ ಅಧ್ಯಕ್ಷರಾಗಿ ಸ್ವತಃ ಬಿಎಸ್‌ವೈ ಅವರೇ ಕಾರ್ಯನಿರ್ವಹಿಸಲಿದ್ದಾರೆ.

ನೂತನವಾಗಿ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಬಿಎಸ್‌ವೈ ಅವರೆ ಅಧ್ಯಕ್ಷರಾಗಿದ್ದು, ಸದಾನಂದಗೌಡ ಅವರನ್ನು ಸದಸ್ಯರನ್ನಾಗಿ ಮಾತ್ರ ನೇಮಕ ಮಾಡಿರುವ ಹಿನ್ನೆಲೆ ಮತ್ತೊಮ್ಮೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಆರಂಭವಾಗಿದೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿದಂತೆ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ನಡುವಿನ ಅಸಮಾಧಾನಕ್ಕೆ ರಾಷ್ಟ್ರ ಬಿಜೆಪಿ ನಾಯಕರು ತೆರೆ ಎಳೆದ ಬೆನ್ನ ಹಿಂದೆಯೇ ಮತ್ತೆ ಶೋಭಾ-ಸದಾನಂದಗೌಡರ ನಡುವೆ ಭಿನ್ನಮತ ಆರಂಭವಾಗಿದೆ.

Leave a Comment