ಬಿಜೆಪಿಯಲ್ಲಿರುವ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಈತ..: ರಾಹುಲ್ ಗಾಂಧಿ ವ್ಯಂಗ್ಯ

ನವದೆಹಲಿ, ಅ.21–ವಿದ್ಯುನ್ಮಾನ ಮತಯಂತ್ರ (ಇವಿಎಂ) ನಲ್ಲಿ ಯಾವ ಗುಂಡಿ ಒತ್ತಿದರೂ ಪ್ರತಿಯೊಂದು ಮತ ಆಡಳಿತ ಪಕ್ಷಕ್ಕೆ ಹೋಗುತ್ತದೆ ಎಂದು ಹರಿಯಾಣ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಯೊಬ್ಬರು ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೇಳಿಕೆ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗದಿಂದ ನೋಟೀಸ್ ಪಡೆದಿರುವ ಶಾಸಕ ಬಕ್ಷಿತ್ ಸಿಂಗ್ ವಿರ್ಕ್ ಅವರನ್ನು ಉದ್ದೇಶಿಸಿ, ಬಿಜೆಪಿಯಲ್ಲಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಏನಾದರೂ ಇದ್ದರೆ ಇವರು ಮಾತ್ರ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಹರಿಯಾಣ ವಿಧಾನಸಭೆಗೆ ಮತದಾನ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಈ ಸಂಬಂಧ ಟ್ವೀಟ್ ಮಾಡಿ. ಬಿಜೆಪಿ ಅಭ್ಯರ್ಥಿ ನೀಡಿರುವ ವಿವಾದಾತ್ಮಕ ಹೇಳಿಕೆಯ ವಿಡಿಯೋ ಅನ್ನು ಪೋಸ್ಟ್ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಕ್ಷಿತ್ ಸಿಂಗ್ ವಿರ್ಕ್, ತಾವು ಸ್ಪರ್ಧಿಸಿರುವ ಅಸಂದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು “ನಿಮ್ಮಲ್ಲಿ ಯಾರಾದರೂ ಮತ ಚಲಾಯಿಸಲು ತೆರಳಿದರೆ ಅದು ನಮಗೆ ಗೊತ್ತಾಗುತ್ತದೆ.. ನಮಗೆ ತಿಳಿಯುವುದಿಲ್ಲ ಎಂದು ಕೊಳ್ಳಬೇಡಿ … ನೀವು ಯಾರಿಗೆ ಮತ ಚಲಾಯಿಸಿದ್ದೀರಿ ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ಏಕೆಂದರೆ ಮೋದಿಜೀ ಬಹಳ ಬುದ್ದಿವಂತರು. ಮನೋಹರ ಲಾಲ್ ಬಹಳ ಬುದ್ಧಿವಂತರು ಎಂದು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ನೀವು ಯಾರಿಗೆ ಮತ ಹಾಕಿದರೂ ಅದು ಕಮಲ ಚಿಹ್ನೆಗೆ ಹೊಗಲಿದೆ… ಇವಿಎಂನಲ್ಲಿ ಇದಕ್ಕಾಗಿ ಸೂಕ್ತ ತಂತ್ರಜ್ಞಾನದ ವ್ಯವಸ್ಥೆ ಮಾಡಿದ್ದೇವೆ ಎಂಬ ಆತನ ಮಾತುಗಳು ಮೊಬೈಲ್‌ಗಳಲ್ಲಿ ಹರಿದಾಡುತ್ತಿವೆ.
ಈ ವಿಡಿಯೋಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಚುನಾವಣಾ ಆಯೋಗ ಬಿಜೆಪಿ ಅಭ್ಯರ್ಥಿ ವಿರ್ಕ್‌ಗೆ ನೋಟಿಸ್ ಜಾರಿ ಮಾಡಿದೆ. ಅಸಂಧ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸಲು ವಿಶೇಷ ವೀಕ್ಷಕರನ್ನು ನೇಮಿಸಿದೆ. ಆದರೆ, ತಮ್ಮ ಧ್ವನಿ ಅನುಕರಿಸಿ ತಯಾರಿಸಿದ ನಕಲಿ ವಿಡಿಯೋ ವೈರಲ್ ಆಗುತ್ತಿದೆ. ಇವಿಎಂ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿರ್ಕ್ ಹೇಳುತ್ತಿದ್ದಾರೆ.

Leave a Comment