ಬಿಜೆಪಿಯನ್ನು ಹಿಟ್ಲರ್‌ಗೆ  ಹೋಲಿಸಿದ ಶಿವಸೇನೆ

ಮುಂಬೈ, ನ. ೧೦- ಮಹಾರಾಷ್ಟ್ರ ರಾಜ್ಯ ಕೇಂದ್ರ ಸರ್ಕಾರದ ಗುಲಾಮನಲ್ಲ ಎಂದಿರುವ ಶಿವಸೇನೆ, ಬಿಜೆಪಿಯನ್ನು ಅತ್ಯಂತ ಕ್ರೂರಿ ಎಂದೇ ಗುರುತಿಸಿಕೊಂಡ ಸರ್ವಾಧಿಕಾರಿ ಹಿಟ್ಲರ್‌ಗೆ ಹೋಲಿಕೆ ಮಾಡಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಈ ರೀತಿ ಬರೆದುಕೊಂಡಿರುವ ಶಿವಸೇನೆ, ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದೆ. ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆಯೇ ಪ್ರಧಾನಮಂತ್ರಿ ನರೇಂದ್ರಮೋದಿ ಅವರು, ದೇವೇಂದ್ರ ಫಡ್ನವೀಸ್ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿಬಿಟ್ಟರು.

ಮಹಾರಾಷ್ಟ್ರದ ಎಲ್ಲ ರಾಜಕೀಯ ಕಾರ್ಯಕ್ರಮಗಳಿಂದ ಗೃಹ ಸಚಿವ ಅಮಿತ್ ಶಾ ದೂರ ಉಳಿದಿದ್ದು, ಕೇಂದ್ರದ ಆಶೀರ್ವಾದವಿದ್ದರೂ ಫಡ್ನವೀಸ್ ಇನ್ನು ಪ್ರಮಾಣವಚನ ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ಶಿವಸೇನೆ ವ್ಯಂಗ್ಯವಾಡಿದೆ.

ಮಹಾರಾಷ್ಟ್ರದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬುದನ್ನು ಶಿವಸೇನೆ ಮುಖ್ಯಸ್ಥ ಉದ್ಧವ್‌ಠಾಕ್ರೆ ನಿರ್ಧರಿಸಲಿದ್ದಾರೆ. ಹಿಟ್ಲರ್ ಸತ್ತು ಹೋದರೂ ಆತನ ಗುಲಾಮಗಿರಿ ನೆರಳು ಕಣ್ಮರೆಯಾಗುತ್ತಿದೆ. ಬಿಜೆಪಿ ತನ್ನ ತಪ್ಪುಗಳಿಂದ ಪಾಠ ಕಲಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾರಾಷ್ಟ್ರದ ರಾಜಕೀಯ ಮಹಾರಾಷ್ಟ್ರ ರಾಜ್ಯಕಷ್ಟೇ ಸೀಮಿತವಾಗಿದೆ. ಇದರಲ್ಲಿ ಯಾರೂ ಮಧ್ಯಪ್ರವೇಶಿಸುವಂತಿಲ್ಲ. ಮಹಾರಾಷ್ಟ್ರ ದೆಹಲಿಯ ಗುಲಾಮವಲ್ಲ ಎಂದಿರುವ ಶಿವಸೇನೆ, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಶರದ್‌ಪವಾರ್ ಅವರು ಪ್ರಮುಖಪಾತ್ರ ವಹಿಸಲಿದ್ದಾರೆ. ಈ ಮೂಲಕ ಎಲ್‌ಸಿಪಿ ಜತೆ ಕೈಜೋಡಿಸಿ ಸರ್ಕಾರ ರಚಿಸುವುದಾಗಿ ಪರೋಕ್ಷವಾಗಿ ಹೇಳಿದೆ.

ದೆಹಲಿ ಪೊಲೀಸರು ಹಾಗೂ ವಕೀಲರ ನಡುವೆ ನಡೆಯುತ್ತಿರುವ ಸಂಘರ್ಷ ಕುರಿತಂತೆ ಶಿವಸೇನೆ ಸಾಮ್ನಾದಲ್ಲಿ ಕಿಡಿಕಾರಿದ್ದು, ಕಾನೂನನ್ನು ಎತ್ತಿ ಹಿಡಿಯಬೇಕಾದ ದೆಹಲಿಯಲ್ಲಿಯೇ ಕಾನೂನು ಉಲ್ಲಂಘನೆಯಾಗುತ್ತಿದೆ. ಬೀದಿಗಿಳಿಯುತ್ತಿರುವ ಪೊಲೀಸರು , ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕಾನೂನನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ.

Leave a Comment