ಬಿಜೆಪಿಗೆ ಜಾರಕಿಹೊಳಿ ಬ್ರದಱ್ಸ್ ಎಲ್ಲೆಡೆ ಹರಿದಾಡಿದ ಸುದ್ದಿ

ಬೆಂಗಳೂರು, ಸೆ. ೧೦- ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ನಾಯಕರುಗಳ ನಡೆ ವಿರುದ್ಧ ಅಸಮಾಧಾನಗೊಂಡಿರುವ ರಮೇಶ್ ಜಾರಕಿಹೊಳಿ ಬ್ರದರ್ಸ್‌ ಬಿಜೆಪಿ ಗಾಳ ಹಾಕಿದ್ದು, ಸದ್ಯದಲ್ಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಕಾದಿದೆ. ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆಗಳಿವೆ ಎಂಬ ವದಂತಿಗಳ ಕಾರುಬಾರು ಇಂದು ಮುಂದುವರೆದಿದೆ.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು 1 ವರ್ಷದ ಅವಧಿಗೆ ಮುಖ್ಯಮಂತ್ರಿ ಮಾಡಿದರೆ ಸರ್ಕಾರ ಬೀಳಿಸಲು ಸಿದ್ಧ ಎಂದು ಜಾರಕಿಹೊಳಿ ಬಿಜೆಪಿ ನಾಯಕರಿಗೆ ಸಂದೇಶ ನೀಡಿರುವುದು ಕಾಂಗ್ರೆಸ್ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿವೆ ಎಂಬ ವದಂತಿಗಳು ಬಿರುಸಾಗಿವೆ.
ರಾಜ್ಯರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಲಿದೆ. ಬೆಳಗಾವಿ ರಾಜಕಾರಣವೇ ಈ ಬದಲಾವಣೆಗಳಿಗೆ ಭಾಷ್ಯ ಬರೆಯಲಿದೆ ಎಂಬ ಸುದ್ದಿಗಳು ಬೆಳಗಾವಿ ರಾಜಕಾರಣದಲ್ಲಿ ಹರಿದಾಡುತ್ತಿವೆ.
ಸಚಿವ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಕ್ಕಿರುವ ಶಾಸಕರ ಜತೆ ಸಮಾಲೋಚನೆ ನಡೆಸಿದ್ದು, ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಇಂದು ಅವರು ಬೆಂಗಳೂರಿನಲ್ಲಿ ಶಾಸಕರ ಜತೆ ಚರ್ಚಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವ ರಮೇಶ್ ಜಾರಕಿಹೊಳಿ ತಮ್ಮ ಜೊತೆ 12-13 ಶಾಸಕರಿದ್ದು, ಈ ಶಾಸಕರನ್ನು ಕಾಂಗ್ರೆಸ್ ನಾಯಕರುಗಳ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ಈ ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಿದರೆ ಸರ್ಕಾರ ರಚಿಸಲು ಬಿಜೆಪಿ ಜತೆ ಕೈಜೋಡಿಸಲು ಸಿದ್ಧ ಎಂಬ ಸಂದೇಶವನ್ನು ರಮೇಶ್ ಜಾರಕಿಹೊಳಿ ಈಗಾಗಲೇ ಬಿಜೆಪಿ ನಾಯಕರಿಗೆ ಮುಟ್ಟಿಸಿದ್ದಾರೆ ಎನ್ನಲಾಗಿದೆ.
ಇಂದು ಬೆಂಗಳೂರಿನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಯ ಹಿರಿಯ ನಾಯಕ ಶ್ರೀರಾಮುಲು ಜತೆ ಚರ್ಚೆ ನಡೆಸಿ ನಂತರ ಯಡಿಯೂರಪ್ಪನವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಇಂದು ಭೇಟಿ ಮಾಡಲಿರುವ ರಮೇಶ್ ಜಾರಕಿಹೊಳಿ, ತಮ್ಮ ಸಹೋದರನಿಗೆ ಮುಖ್ಯಮಂತ್ರಿ ಪಟ್ಟ ನೀಡುವಂತೆ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದ್ದು, ಆದರೆ, ಇದು ಈಡೇರುವುದು ಕಷ್ಟ.
ಆದರೆ, ರಮೇಶ್ ಜಾರಕಿಹೊಳಿ ಸೇರಿದಂತೆ ಅವರ ಜತೆ ಬರುವ ಶಾಸಕರಿಗೆ ಉನ್ನತ ಹುದ್ದೆ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದರೆ ಅದು ಬಿಟ್ಟು ಬೇರೆ ಉನ್ನತ ಹುದ್ದೆ ಹಿಡಿಯುವುದು ಸುಲಭ ಎಂಬ ಲೆಕ್ಕಾಚಾರದಲ್ಲೆ ಜಾರಕಿಹೊಳಿ ಬ್ರದರ್ಸ್, ಮುಖ್ಯಮಂತ್ರಿ ಹುದ್ದೆ ಬೇಡಿಕೆಯ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.
ಯಾವುದು ಏನೇ ಇರಲಿ ರಾಜ್ಯರಾಜಕಾರಣದಲ್ಲಿ ಈಗ ಯಾವುದೂ ಸ್ಪಷ್ಟತೆ ಇಲ್ಲ. ವದಂತಿ ಅಂತೆ-ಕಂತೆಗಳ ಕಾರುಬಾರೇ ಜೋರಾಗಿದೆ.ಯಾವಾಗ ಬೇಕಾದರು ಸರ್ಕಾರ ಪಥನವಾಗಬಹುದು ಎಂಬ ಮಾತುಗಳು ಪ್ರಬಲವಾಗಿದೆ. ಯಾವುದು ಸತ್ಯ ಯಾವುದು ಮಿಥ್ಯ ಎಂಬುದನ್ನು ಕಾಲವೇ ನಿರ್ಣಯಿಸುತ್ತದೆ.

Leave a Comment