ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ

ಬೆಂಗಳೂರು, ಸೆ.೧೨- ಆಪರೇಷನ್ ಕಮಲದ ಬಗ್ಗೆ ಮಾತನಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಆದರೆ ಬಿಜೆಪಿಗೆ ಒಳ್ಳೆಯ ದಿನಗಳು ಬರಲಿವೆ. ಬಿ.ಎಸ್.ವೈ. ಮತ್ತೆ ಸಿಎಂ ಆಗ್ತಾರೆ ಎಂದು ಶಾಸಕ, ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿರುವ ಶಾಸಕ ರೇಣುಕಾಚಾರ್ಯ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ರಾಜ್ಯದ ಜನತೆ ಆಶೀರ್ವಾದ ಮಾಡಿದ್ದರು. ಆದರೆ ಕಾಂಗ್ರೆಸ್-ಜೆಡಿಎಸ್ ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಮತ್ತೆ ಬಿಜೆಪಿಗೆ ಒಳ್ಳೆಯ ಕಾಲ ಬರಲಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳು ಹೇಳುವ ಮೂಲಕ ರಾಜ್ಯದ ಜನತೆಗೆ ಟೋಪಿ ಹಾಕುತ್ತಿದ್ದಾರೆ ಎಂದು ಹೇಳಿರುವ ಅವರು, ಕಾಂಗ್ರೆಸ್ ನವರು ಬಿಜೆಪಿಯ ಒಬ್ಬ ಶಾಸಕನನ್ನು ಟಚ್ ಮಾಡಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗೋದು ಖಚಿತ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಸಚಿವ ಸಾ.ರಾ.ಮಹೇಶ್ ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿ ಬಗ್ಗೆ ಉಡಾಫೆ ಮಾತುಗಳನ್ನು ನಿಲ್ಲಿಸಬೇಕು. ತಾಕತಿದ್ದರೇ ಸಂಪರ್ಕದಲ್ಲಿರುವ ಶಾಸಕರ ಪಟ್ಟಿಯನ್ನು ಕೊಡಿ ಎಂದು ಕಿಡಿಕಾರಿದ್ದಾರೆ.
ನೀನು ಸಚಿವ ನಾದ ತಕ್ಷಣ ದೊಡ್ಡ ಹೀರೋನಾ ಎಂದು ಸಾ.ರಾ.ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು ಮೊನ್ನೆ ಮೊನ್ನೆ ಸಚಿವನಾಗಿದ್ದೀಯಾ ಮೊದಲು ನಿಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಎಂದು ಹೇಳಿದ್ದಾರೆ.

Leave a Comment