ಬಿಎಸ್ ವೈ ಸಿಎಂ ಆಸೆ ತಪ್ಪೇನಲ್ಲ: ಡಿಕೆಶಿ

ರಾಜ್ಯದ ಮೈತ್ರಿ ಸರ್ಕಾರ ಪತನವಾಗಿ, ಬಿಜೆಪಿ ಅಧಿಕಾರಕ್ಕೆ ಬಂದು ತಾವು ಸಿಎಂ ಆಗಬೇಕೆಂಬ ಆಸೆ ಯಡಿಯೂರಪ್ಪನವರದ್ದು. ಪಾಪ, ಅವರ ಆಸೆ ಅವರು ಪಡಲಿ, ಅದರಲ್ಲಿ ತಪ್ಪೇನೂ ಇಲ್ಲ..!’

ಇದು ಮಾಜಿ ಸಿಎಂ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆಗೆ ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿಕೆ ಶಿವಕುಮಾರ್ ನೀಡಿರುವ ಟಾಂಗ್.

ರಾಜಭವನದ ಗಾಜಿನಮನೆಯಲ್ಲಿ ಶುಕ್ರವಾರ ಇಬ್ಬರು ಪಕ್ಷೇತರ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್ ಯಡಿಯೂರಪ್ಪ ಈ ರೀತಿ ತಿರುಗೇಟು ಕೊಟ್ಟರು. ಇದಕ್ಕೆ ಮೊದಲು ಯಡಿಯೂರಪ್ಪನವರು ‘ಮಿತ್ರ ಪಕ್ಷದ ಶಾಸಕರು ಪರಸ್ಪರ ಹೊಡೆದಾಡಿಕೊಂಡು ಸರ್ಕಾರ ಬೀಳುತ್ತದೆ’ ಎಂದು ಹೇಳಿಕೆ ನೀಡಿದ್ದರು. ಸರಕಾರ ಬೀಳುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಸಂತೋಷ ಸಿಗುವುದಾದರೆ ಸಿಗಲು. ನಮಗೇನೂ ಬೇಸರವಿಲ್ಲ. ಕಳೆದೊಂದು ವರ್ಷದಿಂದಲೂ ಯಡಿಯೂರಪ್ಪನವರು ಇದೇ ರೀತಿ ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ನಾವು ಯಡಿಯೂರಪ್ಪನವರ ಭವಿಷ್ಯವನ್ನೂ ನೋಡಿದ್ದೇವೆ, ಬಿಜೆಪಿ ನಾಯಕರ ಭವಿಷ್ಯವನ್ನೂ ನೋಡಿದ್ದೇವೆ’ ಎಂದು ಕಟಕಿಯಾಡಿದರು.

ಪಕ್ಷೇತರರಿಗೆ ಹೆಚ್ಚಿನ ಆದ್ಯತೆ ನೀಡಿರುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಮೈತ್ರಿ ಸರ್ಕಾರ ಸುಗಮವಾಗಿ ನಡೆಯಬೇಕಾದರೆ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅವರನ್ನು ಸೇರಿಸಿಕೊಳ್ಳಲಾಗುತ್ತದೆ. ಪ್ರಾಮಾಣಿಕವಾಗಿರುವ ಹಿರಿಯ ನಾಯಕರಿಗೂ ಮುಂದೆ ಖಂಡಿತ ಅವಕಾಶವಿದೆ. ಪಕ್ಷ ಉಳಿಯಬೇಕು ಅನ್ನೋ ಉದ್ದೇಶದಿಂದ ನಾವು ಎಲ್ಲ ತರಹದ ತ್ಯಾಗಕ್ಕೂ ಸಿದ್ಧರಿದ್ದೇವೆ. ಪಕ್ಷ ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದರು.

Leave a Comment