ಬಿಎಸ್ ವೈ ರಾಜಕೀಯ ನಿವೃತ್ತಿ ಹೊಂದಲಿ

ದಾವಣಗೆರೆ, ಫೆ. 11- ಅಧಿಕಾರದ ಆಸೆಯಿಂದ ಅಪರೇಷನ್ ಕಮಲ ನಡೆಸಲು ಹೊರಟು ನಂತರ ವಿಫಲರಾಗಿ ತಮ್ಮ ತಪ್ಪೊಪ್ಪಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜಕೀಯದಿಂದ ನಿವೃತ್ತಿಯಾಗಬೇಕೆಂದು ಕೆಪಿಸಿಸಿ ಸದಸ್ಯ ಡಿ.ಬಸವರಾಜ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಗುರುಮಿಟಿಕಲ್ ಶಾಸಕ ನಾಗನಗೌಡ ಅವರ ಪುತ್ರ ಶರಣ್‍ಗೌಡ ಜೊತೆಗೆ ಸಂಭಾಷಣೆ ಮಾಡಿರುವುದು ನಾನೇ ಎಂದು ಬಿ.ಎಸ್.ವೈ ನಿನ್ನೆಯ ದಿನ ತಪ್ಪೊಪ್ಪಿಕೊಂಡಿದ್ದಾರೆ. ಅವರು ಈ ಹಿಂದೆ ಮಾತನಾಡಿ ಆಡಿಯೋದಲ್ಲಿ ಇರುವ ಧ್ವನಿ ನನ್ನದು ಎಂದು ಸಾಬೀತಾದರೆ ನಾನು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಾತ್ರವಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಪ್ರಜಾಪ್ರಭುತ್ವದ ಪ್ರವಿತ್ರ ದೇಗುಲ ವಿಧಾನ ಸಭೆಯಲ್ಲಿ ಘೋಷಿಸಿದ್ದರು. ಇದೀಗ ನುಡಿದಂತೆ ನಡೆದು ತಮ್ಮೆಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಹೊಂದಲಿ. ಆಪರೇಷನ್ ಕಮಲದ ಸೂತ್ರದಾರರು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾರವರ ವಿರುದ್ಧವು ಸುಪ್ರೀಂ ಕೋರ್ಟ್ ನ್ಯಾಯದೀಶರಿಂದ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ನಿಯಂತ್ರಣ ಮಾಡಿದ್ದೇನೆಂದು ಹೇಳುತ್ತಾರೆ. ಮೋದಿ ಪರಿಶುದ್ಧ ರಾಜಕಾರಣದ ಬಗ್ಗೆ ಮಾತನಾಡುತ್ತಲೇ ನೂರಾರು ಕೋಟಿ ಅಪರೇಷನ್ ಕಮಲಕ್ಕೆ ಹಣ ಒದಗಿಸುತ್ತಾರೆ. ಫೇಲ್ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಪಡೆದ ಲಂಚದ ಹಣದಲ್ಲಿ ಆಪರೇಷನ್ ಕಮಲ ಮಾಡಲು ಹೊರಟಿದ್ದಾರೆ. ಧ್ವನಿಮುದ್ರಿಕೆಯಲ್ಲಿ ವಿಧಾನ ಸಭೆ ಸ್ಪೀಕರ್ ಅವರನ್ನು ಸಹ 50 ಕೋಟಿ ರೂಪಾಯಿಗಳಿಗೆ ಬುಕ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಪರೇಷನ್ ಕಮಲದ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೂ ಅಲ್ಲಿಯೂ ಸಹ ನ್ಯಾಯಾಧೀಶರನ್ನು ಬುಕ್ ಮಾಡಿದ್ದೇವೆ ಎಂದಿರುವುದು ಜನತೆಗೆ ತಿಳಿದಿದೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಸಂಸ್ಥೆಗಳಾದ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಒದಗಿದ್ದು ಈ ಪ್ರಕರಣವನ್ನು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಲಯಗಳು ಸೋಮೋಟೋ ಕೇಸ್ ದಾಖಲಿಸುವ ಮುಖಾಂತರ ನ್ಯಾಯಾಂಗ ವ್ಯವಸ್ಥೆಯ ಗೌರವ ಕಾಪಾಡಬೇಕೆಂದು ಒತ್ತಾಯಿಸಿದರು. ಕರ್ನಾಟಕ ವಿಧಾನಸಭೆಯ ಸ್ಪೀಕರ್‍ಗೆ ತನ್ನದೇ ಆದ ಗೌರವ ಘನತೆಗಳಿದ್ದು, ಹಾಲಿ ಸ್ಪೀಕರ್ ಆಗಿರುವ ರಮೇಶ್‍ಕುಮಾರ್‍ರವರು ಶುದ್ಧ ಹಸ್ತದ ಪ್ರಮಾಣಿಕ ರಾಜಕಾರಣಯಾಗಿದ್ದು, ಅವರಿಗೆ 50 ಕೋಟಿ ನೀಡಿದ್ದೇವೆಂದು ಧ್ವನಿ ಮುದ್ರಿಕೆಯಲ್ಲಿ ಪ್ರಸಾರವಾಗಿದೆ. ರಾಜ್ಯ ವಿಧಾನ ಸಭೆಯ ಸ್ಪೀಕರ್‍ರವರು ಸಹ ಪ್ರತ್ಯೇಕ ತನಿಖೆಗೆ ಆದೇಶಿಸಬೇಕು. ಮೋದಿ ಅಮಿತ್ ಶಾರವರನ್ನು ರಕ್ಷಿಸಲು ಬಿ.ಎಸ್. ಯಡಿಯೂರಪ್ಪನವರು ತಪ್ಪು ಒಪ್ಪಿಗೆ ನಾಟಕ ಶುರು ಮಾಡಿದ್ದಾರೆ ಸಮಗ್ರ ತನಿಖೆ ನಡೆದರೆ ಮೋದಿ ಅಮಿತ್ ಶಾ ಪಾತ್ರದ ಬಗ್ಗೆ ದೇಶದ ಜನತೆಗೆ ಗೊತ್ತಾಗಲಿದೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಅಲ್ಲಾವಲ್ಲಿ ಘಾಜಿಖಾನ್, ಅಶ್ರಫ್ ಅಲಿ,ಲಿಯಾಖತ್ ಅಲಿ, ಅಬ್ದುಲ್ ಜಬ್ಬಾರ್, ಹರೀಶ್, ಡಿ.ಶಿವಕುಮಾರ್ ಇದ್ದರು.
 ಸಿದ್ದರಾಮಯ್ಯ ಬಳಿ ಕ್ಷಮೆ ಕೇಳಬೇಕು
ಮುಖ್ಯಮಂತ್ರಿ ಹೆಚ್.ಡಿ. ಕುಮಾರ್ ಸ್ವಾಮಿಯವರು ಇತ್ತೀಚೆಗೆ ವಿಧಾನಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪನವರ ಆಡಿಯೋ ಬಾಂಬ್ ಬಿಡುಗಡೆ ಮಾಡಿದಾಗ ಅದರಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸಿದ್ದರಾಮಯ್ಯನವರ ವಿರುದ್ಧ ಬಿ.ಎಸ್. ಯಡಿಯೂರಪ್ಪನವರು ಅವ್ಯಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಇದು ಖಂಡನೀಯ. ಈ ಕೂಡಲೇ ಬಿಎಸ್ ವೈ ಸಿದ್ದರಾಮಯ್ಯನವರ ಕ್ಷಮೆ ಕೇಳಬೇಕು.
ಡಿ.ಬಸವರಾಜ್
ಕೆಪಿಸಿಸಿ ಕಾರ್ಯದರ್ಶಿ

Leave a Comment