ಬಿಎಸ್‌ವೈ ವಿರುದ್ಧ ಆಯೋಗಕ್ಕೆ ಕೈ ನಾಯಕರ ದೂರು

ಬೆಂಗಳೂರು, ಮೇ ೧೬- ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆ ಸಮರದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ರಹಿತ ಹೇಳಿಕೆ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೂ ಸೇರಿದಂತೆ ಕೆಲ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದೆ.

ಲಿಂಗಾಯತ ಧರ್ಮದವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವುದು ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಅವರು ಆರೋಪಿಸಿದರು.

ಎರಡು ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಯಡಿಯೂರಪ್ಪ ಅವರು ಇಂತಹ ಹೇಳಿಕೆ ನೀಡಿ ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿದ್ದಾರೆ ಎಂದು ಆಪಾದಿಸಿದರು.

ಬಿಜೆಪಿಯ ಬಸವನಗೌಡ ಯತ್ನಾಳ್ ಅವರು ರಾಜಕೀಯ ದಿವಾಳಿತನ ಅನುಭವಿಸುತ್ತಿದ್ದರೂ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧವೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.

ಮಾಜಿ ಸಂಸದ ವಿಜಯಸಂಕೇಶ್ವರ ಅವರು ಭಾರತ ದೇಶವನ್ನು ಇದುವರೆಗೆ ಆಳಿದ್ದು ಭಾರತೀಯರಲ್ಲ. ನಾವು ಗುಲಾಮರಾಗಿದ್ದೆವು. ಇನ್ನು ಮುಂದೆ ಮುಕ್ತರಾಗಬೇಕು ಎಂದು ನೆಹರು ಇಂದಿರಾಗಾಂಧಿ, ರಾಜೀವ್ ಗಾಂಧಿಯವರ ವಿರುದ್ಧ ವಾಟ್ಸಾಪ್‌ಗಳ ಮೂಲಕ ಅವಹೇಳನ ಮಾಡಿದ್ದಾರೆ. ಇವರ ಬಗ್ಗೆಯೂ ಸೈಬರ್ ಕ್ರೈಂಗೆ ದೂರು ಸಲ್ಲಿಸುವುದಾಗಿ ಪ್ರಕಾಶ್ ರಾಥೋಡ್ ತಿಳಿಸಿದರು.

ಇಂತಹ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು. ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನವದೆಹಲಿಯಿಂದ ಬೆಂಗಳೂರುವರೆಗೆ ಇಂತಹ ಸಂಸ್ಕಾರರಹಿತ ಹೇಳಿಕೆಗಳು ಬರುತ್ತಿವೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಲೋಕೋಪಯೋಗಿ ಸಚಿವ ರೇವಣ್ಣ ಅವರು ಮಾತ್ರವಲ್ಲ ಎಲ್ಲ ಶಾಸಕರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ವಿಶ್ಲೇಷನ್ ಅಗತ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಳೆ ತೊಡಿಸಬೇಕು ಎಂದು ಸಂಸದೆ ಶೋಭಾಕರಂದ್ಲಾಜೆ ಅವರು ಹೇಳಿಕೆ ನೀಡಿದ್ದಾರೆ. ಈ ಹಿಂದೆಯೂ ಸ್ಮೃತಿ ಇರಾನಿ ಅವರು ಮನಮೋಹನ್ ಸಿಂಗ್ ಅವರಿಗೆ ಬಳೆ ತೊಡಿಸಬೇಕೆಂದು ಹೇಳಿಕೆ ನೀಡಿದ್ದರು. ಇಂದು ಪೆಟ್ರೋಲ್ -ಡೀಸಲ್ ಬೆಲೆ ಏರಿಕೆಯಾಗುವುದಕ್ಕೆ ಕಾರಣರಾಗಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ಬಳೆ ತೊಡಿಸುವುದು ಸೂಕ್ತ ಎಂದು ವ್ಯಂಗ್ಯವಾಡಿದರು.

Leave a Comment