ಬಿಎಸ್‌ವೈ ಪದಚ್ಯುತಿಗೆ ಕುತಂತ್ರ: ಕೇಂದ್ರ ಸಚಿವರಿಬ್ಬರ ಯತ್ನ ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ, ಅ ೯- ಕರ್ನಾಟಕದ ಇಬ್ಬರು ಕೇಂದ್ರ ಸಚಿವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ರಾಜ್ಯದ ಸಚಿವರಿಬ್ಬರ ಕುತಂತ್ರದಿಂದಾಗಿ ಮುಖ್ಯಮಂತ್ರಿ ಅವರು ಪ್ರಧಾನಿಯವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹ ಸಂತ್ರಸ್ತರ ಬಗ್ಗೆ ನಾನು ಧ್ವನಿ ಎತ್ತದಿದ್ದರೆ ಸಿಎಂ ಬಿ ಎಸ್. ಯಡಿಯೂರಪ್ಪ 15 ದಿನದಲ್ಲಿ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗುತಿತ್ತು ಎಂದು ಹೇಳಿದರು.

ಬಿಎಸ್‍ವೈ ಬಗ್ಗೆ ನಿಮಗೆ ಅಸಮಾಧಾನವಿದ್ದರೆ 76 ವರ್ಷವಾಗಿದೆ ಎಂದು ಕರೆಯಿಸಿ ರಾಜೀನಾಮೆ ಪಡೆದುಕೊಳ್ಳಲಿ. ಅನಂತಕುಮಾರ್ ಮತ್ತು ಯಡಿಯೂರಪ್ಪ ಈ ಹಿಂದೆ ಜಗಳವಾಡುತ್ತಿದ್ದರು. ಆದರೆ ಪಕ್ಷ, ಕರ್ನಾಟಕ, ದೇಶದ ಹಿತ ಬಂದಾಗ ಒಗ್ಗೂಡುತ್ತಿದ್ದರು. ಆದರೆ ಈಗ ರಾಜ್ಯದಲ್ಲಿ ನಡೆಯುತ್ತಿರುವುದೇ ಬೇರೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಸ್ತು ಉಲ್ಲಂಘಿಸದ ನಾನು ಶೋಕಾಸ್ ನೋಟಿಸಿಗೆ ಉತ್ತರ ನೀಡುವುದಿಲ್ಲ. ಆದ್ದರಿಂದ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ. ಪ್ರಧಾನಿ ಬಳಿ ರಾಜ್ಯದ ಜನರ ಭಾವನೆ ಹೇಳಿಕೊಳ್ಳಲು ನಾನೇನೂ ಹೆದರಲ್ಲ ಎಂದು ಅವರು ಹೇಳಿದರು.
ನಾನು ಹೇಳಿಕೆ ನೀಡಿದ ಮೇಲೆ ಇಬ್ಬರು ಸಚಿವರು ದೆಹಲಿಗೆ ಹೋಗಿದ್ದರು. ಅವರು ಪ್ರವಾಹ ಪರಿಹಾರ ತರಲು ಹೋಗಿರಲಿಲ್ಲ. ಆದರೆ ನನಗೆ ನೋಟಿಸ್ ಕೊಡಿಸಲು ಹೋಗಿದ್ದರು. ಇಂಥ ಚಾಡಿಕೋರ ಸಚಿವರಿಂದ ರಾಜ್ಯದಲ್ಲಿ ಬಿಜೆಪಿ ಹಾಳಾಗುತ್ತಿದೆ ಎಂದು ಗುಡುಗಿದರು.

ನಾನು ಕರ್ನಾಟಕದಿಂದ ಬಿಜೆಪಿ ಕೇಂದ್ರ ಸಚಿವನಾದ ನಾಲ್ಕನೇ ವ್ಯಕ್ತಿ. ನನ್ನನ್ನು ಹೊರ ಹಾಕಿದರೆ ನನಗೇನೂ ಹಾನಿಯಿಲ್ಲ. ನನ್ನ ಶಕ್ತಿಯನ್ಮು ವಿಧಾನ ಪರಿಷತ್ ನಲ್ಲಿ ತೋರಿಸಿದ್ದೇನೆ. ಪಕ್ಷೇತರನಾಗಿ ಗೆದ್ದಿದ್ದೇನೆ. ನಾನು ಬಿಜೆಪಿ ಸೇರುವಾಗ ಇವರೇನೂ ಸ್ವಾಗತಿಸಿಲ್ಲ. ಅಮಿತ್ ಶಾ, ಪ್ರಕಾಶ್ ಜಾವಡೇಕರ್ ನನ್ನ ಶಕ್ತಿಯನ್ನು ನೋಡಿ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಹೇಳಿದರು. ನಿಮ್ಮ ತಾಕತ್ತು ನೀವು ತೋರಿಸಿ ನಮ್ಮ ತಾಕತ್ತು ನಾನು ತೋರಿಸುತ್ತೇನೆ ಕಾಲ ಬಂದಾಗ ನಾನು ಏನು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದು ಗುಡುಗಿದರು.

ಜಿಗಜಿಣಗಿ ಆಕ್ರೋಶ
ಪಕ್ಷದಲ್ಲಿ ಇದ್ದುಕೊಂಡು ಪಕ್ಷದ ವಿರುದ್ಧವಾಗಿಯೇ ಮಾತನಾಡುವುದು ಸರಿಯಲ್ಲ, ಇದು ಪಕ್ಷ ವಿರೋಧಿ ಚಟುವಟಿಕೆ ನಡೆಸಿದಂತೆ. ಸರ್ಕಾರದ ವಿರುದ್ಧವಾಗಿಯೂ ಸಾರ್ವಜನಿಕವಾಗಿ ಮಾತನಾಡುವುದು ಯಾರಿಗೂ ಶೋಭಿಸುವುದಿಲ್ಲ. 40 ವರ್ಷಗಳ ರಾಜಕಾರಣದಲ್ಲಿ ಇಂಥದ್ದು ಕಂಡಿಲ್ಲ ಎಂದು ಯತ್ನಾಳ್ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment