ಬಿಎಸ್‌ವೈ ನೇತೃತ್ವದಲ್ಲೇ ಚುನಾವಣೆ: ಅಮಿತ್ ಷಾ     

ಬೆಂಗಳೂರು, ಆ. ೧೨- ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತು ಹಾಕುವವರೆಗೂ ಕಾರ್ಯಕರ್ತರು ವಿರಮಿಸಬಾರದು. ಈ ಸರ್ಕಾರವನ್ನು ಕಿತ್ತೊಗೆದು ಬಿಜೆಪಿ ಪಕ್ಷದ ಗೆಲುವಿಗೆ ವಿಶ್ರಮಿಸದೆ ಕೆಲಸ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕಾರ್ಯಕರ್ತರಿಗೆ ಕರೆ ನೀಡಿದರು.

ನಗರಕ್ಕೆ ಮೂರು ದಿನಗಳ ಭೇಟಿಗಾಗಿ ಆಗಮಿಸಿದ ಅಮಿತ್‌ ಷಾ ರವರು ಮಲ್ಲೇಶ್ವರದ ಪಕ್ಷದ ಕಚೇರಿ ಬಳಿ ಕಾರ್ಯಕರ್ತರ ಅದ್ದೂರಿ ಸ್ವಾಗತ ಹಾಗೂ ಸನ್ಮಾನವನ್ನು ಸ್ವೀಕರಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾವನ್ನು ಕಿತ್ತೊಗೆಯುವುದು ತಮ್ಮ ಗುರಿ. ಸರ್ಕಾರವನ್ನು ಕಿತ್ತೊಗೆಯುವವರೆಗೂ ಬಿಜೆಪಿ ಕಾರ್ಯಕರ್ತರು ವಿರಮಿಸಬಾರದು ಎಂದರು.

ರಾಜ್ಯದಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸುವ ಉದ್ದೇಶ ಹೊಂದಿದ್ದೇನೆ. ಕಾರ್ಯಕರ್ತರು ಈ ಸಂಕಲ್ಪಕ್ಕೆ ಕೈ ಜೋಡಿಸಬೇಕು ಎಂದು ಅವರು ಹೇಳಿದರು.

ಯಡಿಯೂರಪ್ಪ ನೇತೃತ್ವದಲ್ಲೆ ಚುನಾವಣೆ

ಮುಂಬರುವ ವಿಧಾನಸಭಾ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲೆ ಎದುರಿಸುತ್ತೇವೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್‌ನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವಂತೆಯೂ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂತು. ಮತ್ತೆ 2018ರ ವೇಳೆಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.

ರಾಜ್ಯದ ಪ್ರಗತಿಗಾಗಿ ಎಲ್ಲರೂ ಒಂದಾಗಿ ಬಿಜೆಪಿಯನ್ನು ಗೆಲ್ಲಿಸೋಣ ಎಂದು ಅವರು ಹೇಳಿದರು.

 ಗ್ರಂಥಾಲಯ ಉದ್ಘಾಟನೆ

ಪಕ್ಷದ ಕಚೇರಿ ಬಳಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಕಚೇರಿ ಒಳಗೆ ಇ-ಗ್ರಂಥಾಲಯವನ್ನು ಅಮಿತ್ ಷಾ ಉದ್ಘಾಟಿಸಿದರು.

ಕಾಂಗ್ರೆಸ್ ಮುಕ್ತ

ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯವನ್ನು ಕಾಂಗ್ರೆಸ್ ಮುಕ್ತ ಮಾಡಲು ಅಮಿತ್ ಷಾ ರವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅಮಿತ್ ಷಾರವರ ಚಾಣಕ್ಷತನದಿಂದ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ ರೀತಿಯಲ್ಲೆ ರಾಜ್ಯದಲ್ಲೂ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯಡಿಯೂರಪ್ಪನವರು ಅಮಿತ್ ಷಾ ರವರಿಗೆ ಮೈಸೂರ ಪೇಟ ಮತ್ತು ಏಲಕ್ಕಿ ಮಾಲೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಉಸ್ತುವಾರಿ ಮುರುಳೀಧರರಾವ್, ವಿರೋಧ ಪಕ್ಷದ ನಾಯಕರಾದ ಜಗದೀಶ್‌ಶೆಟ್ಟರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶವಿಲ್ಲ: ಷಾ ಖಡಕ್ ಸಂದೇಶ

ಮುಂದಿನ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲೇ ಎದುರಿಸುತ್ತೇವೆ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪುನರುಚ್ಚರಿಸುವ ಮೂಲಕ ಬಿಜೆಪಿಯ ಭಿನ್ನಮತೀಯರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲೇ ಮುಂದಿನ ಚುನಾವಣೆ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಕಟ್ಟಪ್ಪಣೆಯನ್ನು ನೀಡುವ ಮೂಲಕ ಭಿನ್ನಮತೀಯ ಧ್ವನಿಗಳಿಗೆ ಅವಕಾಶ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅವರು ರವಾನಿಸಿದರು.

ನಗರದಲ್ಲಿ ಮೂರು ದಿನ ಮೊಕ್ಕಾಂ ಹೂಡುತ್ತೇನೆ. ಎಲ್ಲರ ಜತೆಯೂ ಚರ್ಚಿಸುತ್ತೇನೆ. ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ ಎನ್ನುವ ಮೂಲಕ ಯಾವುದೇ ಅಪಸ್ವರಗಳಿಗೆ ಅವಕಾಶ ಇಲ್ಲ ಎಂಬ ಪರೋಕ್ಷ ಸೂಚನೆಯನ್ನು ನೀಡಿದರು.

ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದಲೇ ಮತ್ತೊಮ್ಮೆ ಬಿಜೆಪಿಗೆ ಬಾಗಿಲು ತೆರೆಯಲಿದೆ. ಮೂರು ದಿನಗಳ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡೋಣ. ಒಗ್ಗಟ್ಟಾಗಿ ಚುನಾವಣೆ ಎದುರಿಸಿ ಎಂಬ ಮಾತುಗಳನ್ನು ಅವರು ಪುನರುಚ್ಚರಿಸಿದರು.

ಅಮಿತ್ ಷಾ ರವರ ಈ ಭಾಷಣ ಸಂದರ್ಭದಲ್ಲಿ ಭಿನ್ನಮತೀಯ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿರಲಿಲ್ಲ.

ವಿಮಾನ ನಿಲ್ದಾಣದಿಂದ ವಾಹನದಲ್ಲಿ ಬರುವುದು ತಡವಾದ ಕಾರಣ ಅಮಿತ್ ಷಾ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಈಶ್ವರಪ್ಪ ಅವರ ಆಪ್ತ ಮೂಲಗಳು ಸಮಜಾಯಿಷಿ ನೀಡಿವೆ.

ಅಮಿತ್ ಷಾ ರವರ ಭಾಷಣದ ಬಳಿಕ ಈಶ್ವರಪ್ಪ ಹಾಗೂ ಸಂತೋಷ್ ಪಕ್ಷದ ಕಚೇರಿಗೆ ಆಗಮಿಸಿದರು.

 

Leave a Comment