ಬಿಎಸ್‌ವೈ ಕಾವೇರಿ ಗೃಹಪ್ರವೇಶ

ಬೆಂಗಳೂರು, ಫೆ. ೨೭- ಮುಖ್ಯಮಂತ್ರಿ ಯಡಿಯೂರಪ್ಪನವರು 78ನೇ ಹುಟ್ಟುಹಬ್ಬದ ದಿನದಂದು ಕಾವೇರಿಗೆ ವಾಸ್ತವ್ಯ ಬದಲಿಸಿದ್ದಾರೆ. ಕಳೆದ 8-10 ದಿನಗಳಿಂದ ಕಾವೇರಿಗೆ ಹೊಸರೂಪ ನೀಡಿ ವಾಸ್ತುಪ್ರಕಾರ ಸಿದ್ದಪಡಿಸಲಾಗಿದೆ.

ಹೋಮ-ಹವನ, ಪೂಜೆ
ಮುಖ್ಯಮಂತ್ರಿ ಯಡಿಯೂರಪ್ಪನವರು ಸರ್ಕಾರಿ ಬಂಗಲೆಗೆ ಇಂದು ತಮ್ಮ ವಾಸ್ತವ್ಯ ಬದಲಿಸಿದ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಕಾವೇರಿಯಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರು ಪೂಜೆ, ಹೋಮ, ಹವನ ನಡೆಸಿದರು.

ಮುಖ್ಯಮಂತ್ರಿ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅವರ ಪತ್ನಿಯರು, ಮಕ್ಕಳು, ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಬಂಧು ಬಳಗ ಬೆಳಿಗ್ಗೆಯಿಂದಲೇ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಕಾವೇರಿಯ ಗೃಹ ಪ್ರವೇಶದ ನಂತರ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾವೇರಿಯಲ್ಲೇ ಸಂಪುಟದ ಸಹದ್ಯೋಗಿಗಳು, ಶಾಸಕರು, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಗಣ್ಯರ ಜತೆ ಉಪಹಾರ ಸೇವಿಸಿದರು.

ಅಭಿನಂದನೆಗಳ ಮಹಾಪೂರ
ಸಚಿವರುಗಳು, ಶಾಸಕರುಗಳು ಹಾಗೂ ಕಾರ್ಯಕರ್ತರುಗಳು, ಯಡಿಯೂರಪ್ಪನವರಿಗೆ ಪುಷ್ಪಗುಚ್ಚ ನೀಡಿ ಕೈ ಕುಲುಕಿ ಹುಟ್ಟುಹಬ್ಬದ ಶುಭಕೋರಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಸರ್ಕಾರಿ ಬಂಗಲೆ ಕಾವೇರಿ ನಿವಾಸವನ್ನು ವಿಶೇಷವಾಗಿ ಶೃಂಗರಿಸಲಾಗಿದ್ದು, ಕಲಾವಿದ ಅಕ್ಷಯ ಜಾಲಿಹಾಳ ಯಡಿಯೂರಪ್ಪನವರ ಚಿತ್ರ ರಚಿಸಿದ್ದು ಗಮನ ಸೆಳೆಯಿತು.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಸುತ್ತಮುತ್ತ ಅವರ ಅಭಿಮಾನಿಗಳು, ಕಾರ್ಯಕರ್ತರು ಯಡಿಯೂರಪ್ಪನವರಿಗೆ ಶುಭಕೋರುವ ಫಲಕಗಳು ರಾರಾಜಿಸುತ್ತಿದ್ದವು.

Leave a Comment