ಬಿಎಂಟಿಸಿ ವೋಲ್ವೊ ಬಸ್‌ ಬದಲು ರಸ್ತೆಗೆ ಎಲೆಕ್ಟ್ರಿಕ್ ಬಸ್

 

ಬೆಂಗಳೂರು, ಅಕ್ಟೋಬರ್ 10 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವೋಲ್ವೊ ಬಸ್‌ಗಳು ಬಿಳಿಯಾನೆಯಾಗಿವೆ. 300 ಹವಾನಿಯಂತ್ರಿತ ಎಸಿ ಬಸ್‌ಗಳನ್ನು ಸಂಸ್ಥೆ ಬದಲಾವಣೆ ಮಾಡಲು ಮುಂದಾಗಿದೆ.

ಎಲೆಕ್ಟ್ರಿಕ್ ಬಸ್‌ಗಳು ವೋಲ್ವೊ ಬಸ್‌ಗಳ ಸ್ಥಾನ ತುಂಬಲಿವೆ. ವಜ್ರ, ವಾಯುವಜ್ರ ಸೇರಿದಂತೆ ಬಿಎಂಟಿಸಿಯಲ್ಲಿ 825 ವೊಲ್ವೋ ಬಸ್‌ಗಳಿವೆ. ಒಂದು ಬಸ್‌ ಬೆಲೆ ಸುಮಾರು 1 ಕೋಟಿ ರೂ.ಗಳು. ಈ ಬಸ್‌ಗಳಿಂದ ಬರುವ ಆದಾಯಕ್ಕಿಂತ ಅದರ ನಿರ್ವಹಣಾ ವೆಚ್ಚವೇ ಸಂಸ್ಥೆಗೆ ಹೊರೆಯಾಗಿದೆ. ನಗರ ಸಾರಿಗೆಗೆ ಹವಾನಿಯಂತ್ರಿತ ವೊಲ್ವೋ ಬಸ್ ಬಳಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಗೆ 2006ರಲ್ಲಿ ಬಿಎಂಟಿಸಿಗೆ ಸಿಕ್ಕಿತ್ತು. ಆದರೆ, ಕೆಂಪು ವೋಲ್ವೊ ಬಸ್‌ಗಳ ನಿರ್ವಹಣೆ ವರ್ಷದಿಂದ ವರ್ಷಕ್ಕೆ ಸಂಸ್ಥೆಗೆ ಹೊರೆಯಾಗುತ್ತಿದೆ.
ಈಗ ಎಲೆಕ್ಟ್ರಿಕ್ ಬಸ್ ಸಂಸ್ಥೆಗೆ ಸೇರುವುದರಿಂದ ವೋಲ್ವೊ ಬಸ್ ಬದಲಾವಣೆ ಮಾಡಲು ಸಂಸ್ಥೆ ಮುಂದಾಗಿದೆ. ಮೊದಲ ಹಂತದಲ್ಲಿ 300 ಎಸಿ ಬಸ್‌ ಬದಲಾಗಲಿದೆ. 1089 ಹವಾನಿಯಂತ್ರಿತ ವಲ್ಲದ ಬಸ್‌ಗಳನ್ನು ಬದಲಾವಣೆ ಮಾಡಲಿದ್ದು, 357 ಡೀಸೆಲ್ ಬಸ್‌ಗಳು ಸೇರ್ಪಡೆಯಾಗಲಿವೆ.
ಜನವರಿ 2020ಕ್ಕೆ ಎಲೆಕ್ಟ್ರಿಕ್ ಬಸ್ ಮತ್ತು 41 ಸೀಟುಗಳ ಡೀಸೆಲ್ ಬಸ್ ಬಿಎಂಟಿಸಿಗೆ ಸೇರುವ ನಿರೀಕ್ಷೆ ಇದೆ. ಹಿಂದೆ ಸಾರಿಗೆ ಸಚಿವರಾಗಿದ್ದ ಡಿ. ಸಿ. ತಮ್ಮಣ್ಣ ವೋಲ್ವೊ ಬಸ್‌ಗಳನ್ನು ಅಕ್ಕಪಕ್ಕದ ನಗರಗಳ ನಗರ ಸಾರಿಗೆಗೆ ಬಳಸಲು ಚಿಂತನೆ ನಡೆಸಿದ್ದರು. ಆದರೆ, ಸಾರಿಗೆ ನಿಗಮಗಳು ಈ ಬಸ್‌ ಬೇಡ ಎಂದು ಹೇಳಿದ್ದವು.
ಎಲೆಕ್ಟ್ರಿಕ್ ಬಸ್‌ಗಳು ಸಂಪೂರ್ಣವಾಗಿ ಚಾರ್ಜ್ ಆದರೆ 200 ಕಿ. ಮೀ. ಓಡಲಿವೆ. ವೋಲ್ವೊ ಬಸ್‌ಗಳ ಪ್ರಯಾಣದರವನ್ನೇ ಎಲೆಕ್ಟ್ರಿಕ್ ಬಸ್‌ಗಳಿಗೆ ವಿಧಿಸಲು ಬಿಎಂಟಿಸಿ ತೀರ್ಮಾನಿಸಿದೆ.

Leave a Comment