ಬಾಹ್ಯಾಕಾಶದಲ್ಲೂ ಕಸ

ಬಾಹ್ಯಾಕಾಶದಲ್ಲಿ ಸಂಗ್ರಹವಾಗುತ್ತಿರುವ ಕಸ ವಿಜ್ಞಾನಿಗಳ ನಿದ್ದೆ ಕೆಡಿಸಿದೆ. ನೆಲದ ಮೇಲಿನ ಕಸಕ್ಕಿಂತ ಬಾಹ್ಯಾಕಾಶದಲ್ಲಿಯ ಕಸದಿಂದ ಜನಕ್ಕೆ ಅಪಾಯ ಎದುರಾಗಿರುವಂತೆ ಬಾಹ್ಯಾಕಾಶ ಕಸದಿಂದ ಬಾಹ್ಯಾಕಾಶ ನೌಕೆಗಳಿಗೆ ಗಂಡಾಂತರ ಎದುರಾಗಿದೆ. ಭೂಕಕ್ಷೆಯಲ್ಲಿ ಸುತ್ತುತ್ತಿರುವ ಲಕ್ಷಲಕ್ಷ ಕಸದ ಚೂರುಗಳು ಈಗಾಗಲೇ ಬಾಹ್ಯಾಕಾಶ ನೌಕೆಗೆ ಡಿಕ್ಕಿ ಹೊಡೆದು ಮತ್ತಷ್ಟು ಕಸದ ರಾಶಿ ಸೃಷ್ಠಿಸಿದೆ. ಹಾಗೇಯೇ ಈಗ ಕಾರ್ಯ ನಿರ್ವಹಿಸುತ್ತಿರುವ ಬಾಹ್ಯಾಕಾಶ ನೌಕೆಗಳಿಗೆ ಇವುಗಳ ಅಪಾಯ ಎದುರಾಗಿದೆ.

ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆಗಳು ಕಳಚಿ ಬೀಳುವ ರಾಕೆಟ್ ಬೂಸ್ಟರ್‌ಗಳು, ಧೂಮಕೇತುಗಳು ಅನ್ಯ ಆಕಾಶಕಾಯಗಳಿಗೆ ಅಪ್ಪಳಿಸುವುದರಿಂದ ಸಿಡಿಯುವ ಶಿಲಾ ಚೂರುಗಳು ಸೇರಿದಂತೆ, ಬಾಹ್ಯಾಕಾಶದಲ್ಲಿ 500,000 ಕ್ಕಿಂತ ಹೆಚ್ಚಿನ ಕಸದ ಚೂರುಗಳು ಭೂ ಕಕ್ಷೆಯಲ್ಲಿ ಸುತ್ತುತ್ತಿವೆ.

ಇವು ಗಂಟೆಗೆ 17,000 ದಿಂದ 18 ಸಾವಿರ ಕಿ.ಮೀ. ವೇಗದಲ್ಲಿ ಸುತ್ತುವುದರಿಂದ ಈ ವೇಗದಲ್ಲಿ ಬಾಹ್ಯಾಕಾಶ ನೌಕೆಗಳಿಗೆ ಡಿಕ್ಕಿಯಾದರೆ ನೌಕೆಗೆ ಭಾರಿ ಅಪಾಯ ತಂದೊಡ್ಡುತ್ತವೆ.

ಬಾಹ್ಯಾಕಾಶ ಶೋಧನೆ ನಿರಂತರವಾಗಿರುವಂತೆಯೇ ಬಾಹ್ಯಾಕಾಶದಲ್ಲಿ ಕಸದ ಚೂರುಪಾರು ಹಾಗೆಯೇ ಸೇರುತ್ತಿರುತ್ತದೆ. ಬಾಹ್ಯಾಕಾಶ ಶೋಧನೆಗೆ ಅಪಾಯಕಾರಿಯಾಗಿರುವ ಈ ಕಸವನ್ನು ಭೂಮಿಗೆ ತರುವ ಬಗ್ಗೆ ನಾಸಾ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ.

ಈಗಾಗಲೇ ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಅಂದಾಜಿಸಿರುವಂತೆ ಬಾಹ್ಯಾಕಾಶದಲ್ಲಿ 500,000 ಕಸದ ತುಣುಕುಗಳು ಭೂಕಕ್ಷೆಯಲ್ಲಿ ಸುತ್ತುತ್ತಿವೆ. ಇವುಗಳ ವೇಗ ಗಂಟೆಗೆ 17,500 ಕಿ.ಮಿ. ವೇಗದಲ್ಲಿ ಸುತ್ತುವ ಸಣ್ಣ ಸಣ್ಣ ಕಸದ ಚೂರುಗಳು ಬಾಹ್ಯಾಕಾಶ ನೌಕೆಗೆ ಡಿಕ್ಕಿಯಾದರೆ ಭಾರೀ ಪರಿಣಾಮ ಬೀರುತ್ತವೆ. ಇಲ್ಲಿ ಸುತ್ತುವ ವೇಗದಿಂದಾಗಿ ಆ ಚೂರುಗಾಳಿಗೆ ಅಷ್ಟೊಂದು ಶಕ್ತಿ ಇರುತ್ತದೆ.

ಬಾಹ್ಯಾಕಾಶದಲ್ಲಿ ಎರಡು ರೀತಿಯಲ್ಲಿ ಕಸ ಸಂಗ್ರಹವಾಗುತ್ತದೆ. ಒಂದು ನೈಸರ್ಗಿಕವಾದದ್ದು, ಇನ್ನೊಂದು ಮಾನವ ನಿರ್ಮಿತ ಧೂಮಕೇತುಗಳ ಅಪ್ಪಳಿಕೆಯಿಂದ ಹೊರಬರುವ ಶಿಲಾ ಚೂರುಗಳು, ಧೂಳಿನ ದೊಡ್ಡದೊಡ್ಡ ಕಣಗಳು ನೈಸರ್ಗಿಕ ಕಸವಾದರೆ ಅವಧಿ ಮುಗಿದು ನಿಷ್ಕಿಯಗೊಂಡಿರುವ ಬಾಹ್ಯಾಕಾಶ ನೌಕೆಗಳು ಕಳಚಿ ಬಿದ್ದಿರುವ ರಾಕೆಟ್ ಬೂಸ್ಟರ್‌ಗಳು ಹಾಗೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹೊರಬರುವ ಕಸ ಇಲ್ಲಿ ಮಾನವ ನಿರ್ಮಿತ ಕಸವಾಗಿದೆ.

ಈ ಕಸದಲ್ಲಿ ಸಣ್ಣಸಣ್ಣ ಚೂರುಗಳಿಂದ ಹಿಡಿದು ದೊಡ್ಡ ಗಾತ್ರದ ಬಾಹ್ಯಾಕಾಶ ಶಿಲೆಯ ತುಣುಕುಗಳು ಇದ್ದು, ಇಲ್ಲಿ ಸಾವಿರಾರು ಕಿ.ಮೀ. ವ್ಯಾಪ್ತಿಯಲ್ಲಿ ವ್ಯಾಪಿಸಿ ಕೊಂಡಿರುತ್ತವೆ.

ಅಪಾಯ

ನಿರಂತರವಾಗಿ ಬಾಹ್ಯಾಕಾಶದಲ್ಲಿ ಸಂಗ್ರಹವಾಗುತ್ತಿರುವ ಕಸ ಈಗಾಗಲೇ ಹಲವು ಅವಘಡಗಳನ್ನು ಸೃಷ್ಠಿಸಿವೆ. 1996 ರಲ್ಲಿ ಫ್ರಾನ್ಸ್ ಬಾಹ್ಯಾಕಾಶ ನೌಕೆ ಕಸದ ಚೂರುಗಳು ಡಿಕ್ಕಿ ಹೊಡೆದಿದ್ದವು. ಈ ಕಸದ ಚೂರುಗಳೂ ಈ ದೇಶದ್ದೇ. ದಶಕದ ಹಿಂದೆ ಇದೇ ದೇಶದ ರಾಕೆಟ್‌ವೊಂದು ಸ್ಫೋಟಗೊಂಡು ಅದರ ಚೂರುಗಳು ಹರಡಿಕೊಂಡಿದ್ದವು. ಹಾಗೆಯೇ ಫೆ. 10, 2009 ರಲ್ಲಿ ರಷ್ಯಾದ ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆ, ಅಮೆರಿಕಾದ ಇಱ್ರೀಡಿಯಂ ವಾಣಿಜ್ಯ ಬಾಹ್ಯಾಕಾಶ ನೌಕೆಗೆ ಡಿಕ್ಕಿ ಹೊಡೆದಿತ್ತು. ಈ ಡಿಕ್ಕಿಯಿಂದ ಬಾಹ್ಯಾಕಾಶಕ್ಕೆ 2 ಸಾವಿರ ಚೂರುಪಾರು ಸೇರ್ಪಡೆಯಾಗಿತ್ತು.

ನಿಷ್ಕ್ರಿಯ ಬಾಹ್ಯಾಕಾಶ ನೌಕೆಯನ್ನು ಧ್ವಂಸ ಮಾಡಲು ಚೀನಾ 2007 ರಲ್ಲಿ ಕಳುಹಿಸಿದ್ದ ಪರೀಕ್ಷಾರ್ಥ ಕ್ಷಿಪಣಿ ಮುಂದಾಗಿಯೂ 2 ರಿಂದ 3 ಸಾವಿರ ಬಾಹ್ಯಾಕಾಶ ತ್ಯಾಜ್ಯ ಉತ್ಪತ್ತಿಯಾಗಿತ್ತು.

ವಿವಿಧ ದೇಶಗಳ 1,149ಕ್ಕೂ ಹೆಚ್ಚು ಬಾಹ್ಯಾಕಾಶ ನೌಕೆಗಳು ಬಾಹ್ಯಾಕಾಶದಲ್ಲಿ ತನ್ನ ನಿಗದಿತ ಕಾರ್ಯದಲ್ಲಿ ತೊಡಗಿವೆ. ಇವುಗಳಿಗೆ ಎಂದು ಯಾವ ಕಸದ ಚೂರು ಬಂದು ಡಿಕ್ಕಿ ಹೊಡೆಯುತ್ತದೆ ಎಂಬ ಆತಂಕ ಎಲ್ಲಾ ಬಾಹ್ಯಾಕಾಶ ವಿಜ್ಞಾನಿಗಳನ್ನು ಸಮಾನವಾಗಿ ಕಾಡುತ್ತಿದೆ.

ಕಷ್ಟದ ಕೆಲಸ

ಬಾಹ್ಯಾಕಾಶಕ್ಕೆ ಯಾವುದೇ ವಸ್ತುವನ್ನು ಕಳುಹಿಸುವುದು ಸುಲಭ. ಆದರೆ ಅಲ್ಲಿಯ ವಸ್ತುವನ್ನು ಭೂಮಿಗೆ ತರುವುದು ಕಷ್ಟ ಎಂದು ಬಾಹ್ಯಾಕಾಶ ಶೋಧನೆ ವಿಜ್ಞಾನಿ ಬಿಲ್ ಏಲರ್ ಹೇಳಿದ್ದಾರೆ.

ಸ್ಪೂಟ್ನಿಕ್ ಬಾಹ್ಯಾಕಾಶ ನೌಕೆಯಿಂದ ಹಿಡಿದು ಇಂದಿನವರೆಗೆ 30 ವರ್ಷಗಳಲ್ಲಿ ಸಂಗ್ರಹವಾಗಿರುವ ಕಸ ಈಗಲೇ ಅಪಾಯದ ಮಟ್ಟ ಮೀರುತ್ತಿದ್ದು, ಇನ್ನಷ್ಟು ಕಸ ಅಲ್ಲಿ ಶೇಖರವಾಗದಿರುವಂತೆ ಹಾಗೂ ಅಲ್ಲಿಯ ಕಸವನ್ನು ಭೂಮಿಗೆ ತರುವ ಬಗ್ಗೆ ನಾಸಾ ಹಲವು ಯೋಜನೆಗಳನ್ನು ರೂಪಿಸುತ್ತಿದೆ.

– ಉತ್ತನೂರು ವೆಂಕಟೇಶ್

 

Leave a Comment