ಬಾಹ್ಯಾಕಾಶದಲ್ಲಿ 5 ಸ್ಟಾರ್ ಹೊಟೇಲ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಫೈವ್ ಸ್ಟಾರ್  ಹೊಟೇಲ್ ನಿರ್ಮಾಣ ಯೋಜನೆಯನ್ನು ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಕಾಸ್ಮೋಸ್ ಕೈಗೆತ್ತಿಕೊಂಡಿದೆ.  ಅತಿ ಶ್ರೀಮಂತ ಬಾಹ್ಯಾಕಾಶ ಪ್ರವಾಸಿಗರನ್ನು ಗಮನದಲ್ಲಿರಿಸಿಕೊಂಡು ಕೈಗೊಂಡಿರುವ ಈ ಯೋಜನೆಯ ವೆಚ್ಚ ಸರಿಸುಮಾರು 16.4 ರಿಂದ 26.2 ಶತಕೋಟಿ ಪೌಂಡ್ಸ್‌ನಷ್ಟು ಭಾರಿ ಮೊತ್ತದ್ದಾಗಿದೆ.

  • ಬಾಹ್ಯಾಕಾಶ ಪ್ರವಾಸಿಗರಿಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಫೈವ್ ಸ್ಟಾರ್  ಹೊಟೇಲ್ ನಿರ್ಮಾಣಕ್ಕೆ ರಷ್ಯಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಾಗಿದೆ.
  • ಇಲ್ಲಿಂದ ಹೋಗುವ ಪ್ರವಾಸಿಗರು ಒಂದೆರಡು ವಾರಗಳ ಕಾಲ ಅಲ್ಲಿಯ ಐಷಾರಾಮಿ  ಹೊಟೇಲ್‌ನಲ್ಲಿ ತಂಗಬಹುದು ಮತ್ತು ಬಾಹ್ಯಾಕಾಶದಲ್ಲಿ ನಡೆಯಬಹುದು. ಒಂದೆರಡು ವಾರದ ಪ್ರವಾಸಕ್ಕೆ ಪ್ರತಿ ಪ್ರವಾಸಿಗ 40 ದಶಲಕ್ಷ ಡಾಲಱ್ಸ್ ಪಾವತಿಸಬೇಕು. ಒಮ್ಮೆಲೆ ಇಷ್ಟೊಂದು ಮೊತ್ತ ಪಾವತಿಸಲು ಕಷ್ಟವಾದವರಿಗೆ ಕಂತುಗಳಲ್ಲಿ ನೀಡುವ ಅವಕಾಶವೂ ಇದೆ.

ಉದ್ದೇಶಿತ ಈ ತಾರಾ  ಹೊಟೇಲ್‌ನಲ್ಲಿ 4 ಖಾಸಗಿ ಕೋಣೆಗಳು, ಪಡಸಾಲೆ, ಕಿಟಕಿ, ವೈ-ಫೈ ವ್ಯವಸ್ಥೆಗಳು ಇರಲಿವೆ. ಹಾಗೆಯೇ ಹೊಟೇಲ್ ಕೋಣೆಯಿಂದಲೇ ಭೂ ಗ್ರಹವನ್ನು ವೀಕ್ಷಿಸಲು ತಳಭಾಗದಲ್ಲಿ ಚಿಕ್ಕರಂಧ್ರಗಳೂ ಇರುತ್ತವೆ. ಸುಮಾರು 330 ರಿಂದ 435 ಕಿ.ಮೀ. ಎತ್ತರದ ಬಾಹ್ಯಾಕಾಶದಿಂದ ಭೂಮಿಯನ್ನು ವೀಕ್ಷಿಸುವುದು ಅದ್ಭುತ ಅನುಭವ ನೀಡಲಿದೆ.

ಬಾಹ್ಯಾಕಾಶ ನಡಿಗೆ

ಹೋಗುವ ಪ್ರವಾಸಿಗರಿಗೆ ಬಾಹ್ಯಾಕಾಶ ನಡಿಗೆಯ ಅವಕಾಶವೂ ಇರುತ್ತದೆ. ವಾರಗಟ್ಟಲೆ ಬಾಹ್ಯಾಕಾಶದಲ್ಲಿರುವ ಬಾಹ್ಯಾಕಾಶದಲ್ಲಿ ನಡೆಯುವ ಅಪರೂಪದ ಅನುಭವ ದೊರೆಯಲಿದೆ ಎಂದು ಕಾಸ್ಮೋಸ್ ಮೂಲಗಳು ಹೇಳಿವೆ.

ಇಷ್ಟೊಂದು ಅಪರೂಪ ಹಾಗೂ ಅದ್ಭುತ ಅನುಭವ ಪಡೆಯಲು ಅಲ್ಲಿಗೆ ಹೋಗುವ ಪ್ರವಾಸಿಗರು ಅದಕ್ಕೆ ತಕ್ಕಂತೆ ದುಬಾರಿ ದರವನ್ನು ತೆರಬೇಕಿದೆ. ಕಾಸ್ಮೋಸ್ ಮೂಲಗಳ ಪ್ರಕಾರ ಒಂದೆರಡು ವಾರ ಅಲ್ಲಿಯ ಇರುವಿಕೆಗೆ ಪ್ರತಿ ಪ್ರಯಾಣಿಕ 40 ದಶಲಕ್ಷ ಡಾಲಱ್ಸ್ ಪಾವತಿಸಬೇಕು. ಒಂದು ವೇಳೆ ಅಲ್ಲಿಯ ರೋಚಕ ಕ್ಷಣಗಳನ್ನು ಇನ್ನಷ್ಟು ದಿನ ಕಳೆಯಬೇಕಾದರೆ ಅದಕ್ಕೂ ಅವಕಾಶವುಂಟು. ಆದರೆ ಹೆಚ್ಚುವರಿಯಾಗಿ ಅದಕ್ಕೆ 20 ದಶಲಕ್ಷ ಡಾಲಱ್ಸ್ ಪಾವತಿಸಬೇಕು.

ಬಾಹ್ಯಾಕಾಶ ಪ್ರವಾಸಕ್ಕಾಗಿ ಹೋಗುವವರಿಗೆ ಒಮ್ಮೆಲೆ 40 ದಶಲಕ್ಷ ಡಾಲಱ್ಸ್‌ನಷ್ಟು ಮೊತ್ತ ಕಟ್ಟಲು ಕಷ್ಟವಾದರೆ, ಕಂತುಗಳಲ್ಲಿ ಕಟ್ಟಲು ಅವಕಾಶವಿದೆ. ಮೊದಲಿಗೆ 4 ದಶಲಕ್ಷ ಡಾಲಱ್ಸ್ ಪಾವತಿಸಿ ಸೀಟ್ ಕಾದಿರಿಸಿದರೆ, ನಂತರ ಎರಡು ಕಂತುಗಳಲ್ಲಿ ತಲಾ 12.6 ದಶಲಕ್ಷ ಡಾಲಱ್ಸ್ ಪಾವತಿಸಬಹುದು. ಉಳಿದ 10.8 ದಶಲಕ್ಷ ಡಾಲಱ್ಸ್ ಅನ್ನು ಪ್ರಯಾಣಕ್ಕಾಗಿ ಬಾಹ್ಯಾಕಾಶ ನೌಕೆ ಹತ್ತುವಾಗ ಪಾವತಿಸಬಹುದಾಗಿದೆ.

ಇಲ್ಲಿಂದ ಹೋಗುವ ಪ್ರವಾಸಿಗರ ಆರೋಗ್ಯದ ರಕ್ಷಣೆಯ ಬಗ್ಗೆಯೂ ಹೆಚ್ಚಿನ ಗಮನ ನೀಡಲಾಗಿದೆ ಎಂದೂ ಕಾಸ್ಮೋಸ್ ಮೂಲಗಳು ಹೇಳಿವೆ.

ಉತ್ತನೂರು ವೆಂಕಟೇಶ್

Leave a Comment