ಬಾಹ್ಯಾಕಾಶದಲ್ಲಿ ಭಾರತೀಯರು : ಏಪ್ರಿಲ್‌ನಲ್ಲಿ ಚಂದ್ರಯಾನ-2, 2021ರ ಡಿಸೆಂಬರ್‌ನಲ್ಲಿ ಗಗನಯಾನಕ್ಕೆ ಇಸ್ರೋ ಸಿದ್ಧತೆ

ಬೆಂಗಳೂರು, ಜ. ೧೧- ಬಹುನಿರೀಕ್ಷಿತ ಚಂದ್ರಯಾನ – 2 ಯೋಜನೆಯನ್ನು ಏಪ್ರಿಲ್ ಮಧ್ಯಭಾಗದಲ್ಲಿ ಕೈಗೆತ್ತಿಕೊಳ್ಳಲು ಮುಂದಾಗಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ, 2021ರ ಡಿಸೆಂಬರ್‌ನಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯಾದ ‘ಗಗನಯಾನ’ ಕೈಗೊಳ್ಳುವ ಗುರಿ ಹಾಕಿಕೊಂಡಿದೆ.

  • ಏಪ್ರಿಲ್ ಮಧ್ಯಭಾಗದಲ್ಲಿ ಚಂದ್ರಯಾನ – 2 ಕೈಗೆತ್ತಿಕೊಳ್ಳಲು ಇಸ್ರೋ ಸಿದ್ಧತೆ.
  • 2021ರ ಡಿಸೆಂಬರ್‌ನಲ್ಲಿ ಮಾನವ ಸಹಿತ ಗಗನಯಾನ ಯೋಜನೆಯ ಗುರಿ.
  • ಮಹಿಳಾ ಗಗನಯಾತ್ರಿ ಕಳುಹಿಸುವ ಚಿಂತನೆ.
  • ರಷ್ಯಾ ಮತ್ತು ಫ್ರಾನ್ಸ್ ಜೊತೆ ಒಪ್ಪಂದ.
  • 10 ಸಾವಿರ ಕೋಟಿ ರೂ. ಮೊತ್ತದ ಬೃಹತ್ ಯೋಜನೆ.
  • ಕಳೆದ ವರ್ಷ 17 ಯೋಜನೆಗಳು ಯಶಸ್ವಿ.
  • ಈ ವರ್ಷ 32 ಹೊಸಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಸ್ರೋ ಸಿದ್ಧತೆ.
  • ವಿದ್ಯಾರ್ಥಿಗಳನ್ನು ನಾಸಾಕ್ಕೆ ಕಳುಹಿಸಲು ಚಿಂತನೆ.

chandrayana2

10 ಸಾವಿರ ಕೋಟಿ ರೂ. ಮೊತ್ತದ ಈ ಗಗನಯಾನ ಯೋಜನೆಯಲ್ಲಿ ಮಹಿಳೆ ಸೇರಿದಂತೆ, ಖಗೋಳ ಶಾಸ್ತ್ರಜ್ಞರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ಆರಂಭಿಸಲಾಗಿದ್ದು, ಈ ಮೂಲಕ ಬಾಹ್ಯಾಕಾಶಕ್ಕೆ ಖಗೋಳ ಶಾಸ್ತ್ರಜ್ಞರನ್ನು ಕಳುಹಿಸಿದ ನಾಲ್ಕನೇ ದೇಶ ಎನ್ನುವ ಹಿರಿಮೆ ಭಾರತದ ಪಾಲಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಗಗನಯಾನಕ್ಕೆ ಅಗತ್ಯ ನೆರವು ಮತ್ತು ಸಹಾಯ ಕೋರುವ ಸಂಬಂಧ ರಷ್ಯಾ ಮತ್ತು ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲು ಇಸ್ರೋ ಮುಂದಾಗಿದೆ ಎಂದು ಹೇಳಿದ ಅವರು, ಈ ಸಂಬಂಧ ಗಗನಯಾನ ಕೈಗೊಳ್ಳುವವರಿಗಾಗಿ ತರಬೇತಿಯನ್ನು ರಷ್ಯಾದಲ್ಲಿ ನೀಡಲಾಗುವುದು. ಈ ಗಗನಯಾನ ಯೋಜನೆಯಲ್ಲಿ ಮಹಿಳೆಯೂ ಇರಲಿದ್ದಾರೆ ಎಂದರು.

ಚಂದ್ರಯಾನ – 1 ಹತ್ತು ವರ್ಷಗಳ ಹಿಂದೆ ನಡೆದಿತ್ತು. ಇದೀಗ ಚಂದ್ರಯಾನ – 2 ಯೋಜನೆಯನ್ನು ಮಾರ್ಚ್ 25 ರಿಂದ ಏಪ್ರಿಲ್ ಅಂತ್ಯದ ವೇಳೆಗೆ ಕೈಗೊಳ್ಳಲಾಗಿದೆ ಎಂದರು.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮಹಿಳೆ ಅಥವಾ ಪುರುಷರನ್ನು 2022ರ ವೇಳೆಗೆ ಬಾಹ್ಯಾಕಾಶಕ್ಕೆ ಕಳುಹಿಸುವ ಗಗನಯಾನವನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಕಟಿಸಿದ್ದರು. ಆ ನಿಟ್ಟಿನಲ್ಲಿ ಇಸ್ರೋ ಮುಂದಾಗಿದ್ದು, 2021ರ ಡಿಸೆಂಬರ್‌ ವೇಳೆಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದ್ದೇವೆ ಎಂದರು.

chandrayana2bಚಂದ್ರಯಾನ – 2, ಗಗನಯಾನ ಅಲ್ಲದೆ, ಇಸ್ರೋ, ಜಿಎಸ್‌ಎಲ್‌ವಿ ಎಂ.ಕೆ.-3 ಉಪಗ್ರಹ ಉಡಾವಣೆಯಲ್ಲಿ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

2018 ರಲ್ಲಿ 17 ಉಪಗ್ರಹ ಉಡಾವಣೆ ಮಾಡಿದ್ದು, ಬಹುತೇಕ ಯಶಸ್ವಿಯಾಗಿದೆ. ಅವುಗಳಲ್ಲಿ 17 ಸಂವಹನ, 2 – ವಿಜ್ಞಾನ, 8- ನ್ಯಾವಿಗೇಷನ್, 17 – ಸರ್ವೇಲೆನ್ಸ್ ಉಪಗ್ರಹಗಳೂ ಸೇರಿವೆ ಎಂದು ತಿಳಿಸಿದರು.

ಈ ವರ್ಷ ಚಂದ್ರಯಾನ – 2 ಸೇರಿದಂತೆ, 32 ಹೊಸಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಸ್ರೋ ತಂಡ ಈಗಾಗಲೇ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಬಾಹ್ಯಾಕಾಶಕ್ಕೆ ಮಾನವನನ್ನು ಕಳುಹಿಸುವ ತಂತ್ರಜ್ಞಾನ ಅಭಿವೃದ್ಧಿಯ ಸಂಬಂಧ ಇಸ್ರೋ ಇಲ್ಲಿಯ ತನಕ 173 ಕೋಟಿ ರೂ. ಖರ್ಚು ಮಾಡಿದೆ.

2021ರ ಡಿಸೆಂಬರ್‌ನಲ್ಲಿ ಬಹುನಿರೀಕ್ಷಿತ ಗಗನಯಾನವನ್ನು ಕೈಗೆತ್ತಿಕೊಳ್ಳುವ ಉದ್ದೇಶ ಸಂಸ್ಥೆಯದ್ದು ಎಂದು ಹೇಳಿದರು.

ದೇಶಾದ್ಯಂತ 6 ಇನ್ಕ್ಯುಬೇಷನ್ ಮತ್ತು ಸಂಶೋಧನಾ ಸಂಸ್ಥೆಗಳನ್ನು ಆರಂಭಿಸಲು ಇಸ್ರೋ ಮುಂದಾಗಿದೆ. ಅದರಲ್ಲಿ ಜಮ್ಮು – ಕಾಶ್ಮೀರದಲ್ಲಿ ವಿಜ್ಞಾನ ಕೇಂದ್ರವೂ ಸೇರಿದೆ. ಇದರಿಂದಾಗಿ ಹೊಸಸಂಶೋಧನಾ ಕೇಂದ್ರಗಳಿಂದ ಮೀನುಗಾರರ ರಕ್ಷಣೆ, ನ್ಯಾವಿಗೇಷನ್ ಸುಧಾರಣೆ ಸೇರಿದಂತೆ, ಹಲವು ಪ್ರಯೋಜನಗಳಾಗಲಿವೆ ಎಂದರು.

ವಿಜ್ಞಾನ ವಿಷಯಗಳಲ್ಲಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳನ್ನು ಇಸ್ರೋ ಆಯ್ಕೆ ಮಾಡಿಕೊಂಡು ಅವರನ್ನು ಹೆಚ್ಚಿನ ಸಂಶೋಧನೆಗೆ ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ನಾಸಾಗೆ ಕಳುಹಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಕಳೆದ ತಿಂಗಳಷ್ಟೇ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಭಾರತದ ಮೂವರು ಖಗೋಳ ಶಾಸ್ತ್ರಜ್ಞರನ್ನು 7 ದಿನಗಳ ಕಾಲ ಬಾಹ್ಯಾಕಾಶಕ್ಕೆ ಕಳುಹಿಸಲು ಕೇಂದ್ರ ಸರ್ಕಾರದ ಮುಂದಾಗಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ. ಅನುದಾನ ನೀಡಲು ಮುಂದಾಗಿದೆ ಎಂದು ತಿಳಿಸಿದ್ದರು.

Leave a Comment