ಬಾಹ್ಯಾಕಾಶಕ್ಕೆ 3 ಮಂದಿ ಪಯಣಕ್ಕೆ ಭಾರತ ಸಿದ್ಧತೆ

ಬೆಂಗಳೂರು, ಸೆ. ೬- ಭಾರತ ಹಾಗೂ ಫ್ರಾನ್ಸ್ ಜಂಟಿಯಾಗಿ ಗಗನಯಾನ ಕೈಗೊಳ್ಳುವ ಯೋಜನೆಯನ್ನು ಇಂದು ಪ್ರಕಟಿಸಿವೆ. 2022ಕ್ಕೂ ಮುನ್ನವೇ ಭಾರತ ಮೂರು ಮಂದಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ.
ಸ್ವಾತಂತ್ರ್ಯೋತ್ಸವದ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ 2022ರ ವೇಳೆಗೆ ಮಾನವ ಸಹಿತ ಗಗನಯಾನ ಯಾತ್ರೆ ಕೈಗೊಳ್ಳುವ ಯೋಜನೆಯನ್ನು ಪ್ರಕಟಿಸಿದ್ದರು. ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ.
ಮಾನವ ಸಹಿತ ಗಗನಯಾನ ಕೈಗೊಂಡಿರುವ ಅಮೆರಿಕ, ಚೀನಾ ಮತ್ತು ರಷ್ಯ ಸಾಲಿಗೆ ಭಾರತವೂ ಸೇರ್ಪಡೆಯಾಗಲು ಮುಂದಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ 2022ರ ವೇಳೆಗೆ ಮೂರು ಮಂದಿಯನ್ನು ಗಗನಯಾನಕ್ಕೆ ಕಳುಹಿಸಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜನೆಗೊಂಡಿರುವ 6ನೇ ಬೆಂಗಳೂರು ಬಾಹ್ಯಾಕಾಶ ವಸ್ತು ಪ್ರದರ್ಶನದ ಉದ್ಘಾಟನಾ ಸಂದರ್ಭದಲ್ಲಿ ಭಾರತ ಮತ್ತು ಫ್ರಾನ್ಸ್ ಜೊತೆಯಾಗಿ ಗಗನಯಾನ ಕೈಗೊಳ್ಳುವ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿವೆ. ಈ ಸಂದರ್ಭದಲ್ಲಿ ಮಾತನಾಡಿದ
ಫ್ರಾನ್ಸ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಜೀನ್ ವೈವಿಸ್ ಲೀ ಗಾಲ್ ಅವರು ಭಾರತ ಮತ್ತು ಫ್ರಾನ್ಸ್ ಜೊತೆಯಾಗಿ ಗಗನಯಾತ್ರೆ ಕೈಗೊಳ್ಳಲು ನಿರ್ಧಾರ ಕೈಗೊಂಡಿವೆ. ಇದರಿಂದಾಗಿ ಎರಡೂ ದೇಶಗಳ ಸಂಬಂಧ ವೃದ್ಧಿಯಾಗುವ ಜೊತೆಗೆ ಬಾಹ್ಯಾಕಾಶ ಯಾನದಲ್ಲಿ ಹೊಸ ಅಧ್ಯಾಯವನ್ನು ಬರೆಯಲು ಸಜ್ಜಾಗಿದ್ದೇವೆ ಎಂದು ಹೇಳಿದರು.
ಗಗನಯಾನ ಕೈಗೊಳ್ಳುವ ಕುರಿತು ಈಗಾಗಲೇ ಎರಡೂ ದೇಶಗಳ ಇಂಜಿನಿಯರ್‌ಗಳ ತಂಡ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಗಗನಯಾನ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳು ಸೇರಿದಂತೆ, ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿದೆ. 2022ಕ್ಕೆ ಮುಂಚೆಯೇ ಮಾನವ ಸಹಿತ ಗಗನಯಾನ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Comment