ಬಾವಿಯಲ್ಲಿ ಈಜಲು ಹೋದ ಪತ್ರಕರ್ತ ಸಾವು

ತುಮಕೂರು, ಫೆ. ೨೩- ರಜೆಯನ್ನು ಕಳೆಯಲು ಊರಿಗೆ ಬಂದಿದ್ದ ಪತ್ರಕರ್ತನೋರ್ವ ಬಾವಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕದಿರೇನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ರೋಹಿತ್ (36) ಎಂಬುವರೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ದೈವಿ.

ರೋಹಿತ್ ಅವರಿಗೆ ಪತ್ನಿ, ಹೆಣ್ಣು ಮಗು ಹಾಗೂ ತಂದೆ-ತಾಯಿ ಇದ್ದಾರೆ. ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯಲ್ಲಿ ಅವರು ವಾಸಿಸುತ್ತಿದ್ದರು. ಶಿವರಾತ್ರಿ ಪ್ರಯುಕ್ತ ಕುಟುಂಬಸ್ಥರ ಜತೆ ತಮ್ಮ ಕದಿರೇನಹಳ್ಳಿಯಲ್ಲಿರುವ ಸೋದರ ಮಾವನ ಮನೆಗೆ ಬಂದಿದ್ದರು.

ತಂದೆ, ತಮ್ಮ ಹಾಗೂ ಮಾವನ ಮಗನನ್ನು ಕರೆದುಕೊಂಡು ಹೊಲದಲ್ಲಿದ್ದ ಬಾವಿಯಲ್ಲಿ ಈಜಾಡಲು ತೆರಳಿದ್ದರು. ರೋಹಿತ್ ಒಬ್ಬರೇ ಬಾವಿಗೆ ಇಳಿದಿದ್ದಾರೆ. ಈಜಾಡುವ ವೇಳೆ ಸುಸ್ತಾಗಿ ಈಜಾಡಲು ಸಾಧ್ಯವಾಗದೆ ಕಿರುಚಾಡಿದ್ದಾರೆ. ಬಾವಿ ದಡದಲ್ಲಿ ಕುಳಿತಿದ್ದವರಿಗೆ ಈಜು ಬಾರದ ಕಾರಣ ಯಾರೂ ನೀರಿಗೆ ಇಳಿದಿಲ್ಲ. ಅಷ್ಟರಲ್ಲಿ ರೋಹಿತ್ ಮೃತಪಟ್ಟಿದ್ದಾರೆ ಎಂದು ಕ್ಯಾತ್ಸಂದ್ರ ಠಾಣೆ ಪೊಲೀಸರು ತಿಳಿಸಿದ್ದಾರೆ.

ರೋಹಿತ್ ಅವರ ಸ್ವಗ್ರಾಮ ಊರ್ಡಿಗೆರೆ ಹೋಬಳಿಯ ಬೇವಿನಹಳ್ಳಿಯಲ್ಲಿ ಇಂದು ಅವರ ಅಂತ್ಯಕ್ರಿಯೆ ನೆರವೇರಿತು.

Leave a Comment