ಬಾವಿಗೆ ಬಿದ್ದು ಚಿರತೆ ಸಾವು

ಉಡುಪಿ, ಸೆ.೯- ಶಿರಿಯಾರ ಗ್ರಾಮದ ಹಾರ್ಯಾಡಿ ಎಂಬಲ್ಲಿ ನಾಯಿಯ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆಯೊಂದು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ನಿನ್ನೆ ಬೆಳಗಿನ ಜಾವ ನಡೆದಿದೆ.
ಸೆ.೭ರಂದು ರಾತ್ರಿ ವೇಳೆ ಹಾರ್ಯಾಡಿಯ ನವೀನ್ ಶೆಟ್ಟಿ ಎಂಬವರ ಮನೆಯ ನಾಯಿಯನ್ನು ಹಿಡಿಯಲು ಬಂದ ಚಿರತೆಯು ಮನೆ ಸಮೀಪದಲ್ಲೇ ಇರುವ ಆವರಣ ಇಲ್ಲದ ಬಾವಿಗೆ ನಾಯಿ ಜೊತೆ ಬಿತ್ತೆನ್ನಲಾಗಿದೆ. ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬಾವಿ ಇಣುಕಿ ನೋಡಿದಾಗ ನಾಯಿ ಬಿದ್ದಿರುವುದು ಕಂಡುಬಂತು. ಕೂಡಲೇ ಬುಟ್ಟಿ ಇಳಿಸಿ ನಾಯಿಯನ್ನು ಮೇಲಕ್ಕೇತ್ತಲಾಯಿತು. ಬಳಿಕ ಮನೆಯವರುಗೆ ಬಾವಿಯಲ್ಲಿ ಚಿರತೆ ಕೂಡ ಇರುವುದು ತಿಳಿಯಿತ್ತೆನ್ನ ಲಾಗಿದೆ. ಈ ಬಗ್ಗೆ ಬೆಳಗ್ಗೆ ಶಂಕರನಾರಾಯಣ ಅರಣ್ಯ ಇಲಾಖೆಯವರಿಗೆ ಮನೆಯವರು ಮಾಹಿತಿ ನೀಡಿದ್ದು, ಬೆಳಗ್ಗೆ ೭.೪೫ರ ಸುಮಾರಿಗೆ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದರು. ಆದರೆ ನೀರಿನಿಂದ ತುಂಬಿರುವ ಬಾವಿ ಯಲ್ಲಿ ಚಿರತೆ ಕಂಡುಬರಲಿಲ್ಲ. ಬಳಿಕ ಮುಳುಗು ತಜ್ಞ ಮಂಜುನಾಥ್‌ರನ್ನು ಕರೆಸಿ ನೀರು ಕುಡಿದು ಮುಳುಗಿ ಮೃತಪಟ್ಟ ಚಿರತೆಯನ್ನು ಬೆಳಗ್ಗೆ ೯.೧೫ರ ಸುಮಾರಿಗೆ ಮೇಲಕ್ಕೇತ್ತಲಾಯಿತು. ಚಿರತೆಯ ಮರಣೋತ್ತರ ಪರೀಕ್ಷೆಯನ್ನು ಸಾಬರಕಟ್ಟೆಯ ಪಶುವೈದ್ಯಾಧಿಕಾರಿ ಹಾರ್ದಳ್ಳಿ ಮಂಡಳ್ಳಿಯ ಡಿಪ್ಪೋದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಮಧ್ಯಾಹ್ನ ವೇಳೆ ಅಲ್ಲೇ ಚಿರತೆಯ ಅಂತ್ಯಕ್ರಿಯೆ ನಡೆಸಲಾಯಿತು. ಇದು ಮೂರುವರೆ ವರ್ಷದ ಗಂಡು ಚಿರತೆಯಾಗಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಎಸಿಎಫ್ ಲೋಹಿತ್, ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ಗೋಪಾಲ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್ ಕುಮಾರ್, ಹರೀಶ್, ವೆಂಕಟೇಶ್ ಹಾಗೂ ಅರಣ್ಯ ರಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.

Leave a Comment