ಬಾವಿಗೆ ಜಿಗಿದು ರೈತ ಆತ್ಮಹತ್ಯೆ

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ,ಜೂ.13-ಸರಿಯಾಗಿ ಮಳೆ ಬರದೆ, ಬೆಳೆ ಬಾರದೇ ಇರುವುದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತನೊಬ್ಬ ಹೊಲದಲ್ಲಿನ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಮೂಡ್ ಗ್ರಾಮದಲ್ಲಿ ನಡೆದಿದೆ.

ನಾಗರೆಡ್ಡಿ ಕಪನೂರ ಆತ್ಮಹತ್ಯೆಗೆ ಶರಣಾದ ರೈತ.

ಕಲ್ಮೂಡ್ ಸೀಮಾಂತರದಲ್ಲಿ 3 ಎಕರೆ ಜಮೀನಿದ್ದು, ಕಮಲಾಪುರ ಕೆನರಾ ಬ್ಯಾಂಕ್ ನಲ್ಲಿ 50 ಸಾವಿರ ರೂಪಾಯಿ ಬೆಳೆಸಾಲ ತೆಗೆದುಕೊಂಡಿದ್ದ. ಮಳೆ ಬರದೆ, ಬೆಳೆ ಬಾರದೇ ಇರುವುದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಹೊಲದಲ್ಲಿನ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಶರಣಾದ ರೈತ ನಾಗರೆಡ್ಡಿ ಕಪನೂರ ಅವರಿಗೆ ರೇಣುಕಾ ಮತ್ತು ಗೀತಾ ಎಂಬ ಇಬ್ಬರು ಹೆಣ್ಣು ಮಕ್ಕಳು ಮತ್ತು ರಾಜರೆಡ್ಡಿ ಮತ್ತು ಮಾಣಿಕ ರೆಡ್ಡಿ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ರೇಣುಕಾ ಅಂಗವಿಕಲೆಯಾಗಿದ್ದು, ಗೀತಾಗೆ ಎರಡೂ ಕಣ್ಣು ಕಾಣುವುದಿಲ್ಲ ಎಂದು ತಿಳಿದುಬಂದಿದೆ.

ಮೃತ ರೈತನ ಪತ್ನಿ ವಿಜಯಲಕ್ಷ್ಮೀ ಕಪನೂರ ಅವರು ನೀಡಿದ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Comment