ಬಾಳಿನಲಿ ಬೆಳಗಿ ಅರುಣ ಅಸ್ತಂಗತ: ಇಂದು ಮಧ್ಯಾಹ್ನ ಜೇಟ್ಲಿ ನಿಧನ, ನಾಳೆ ಅಂತ್ಯಕ್ರಿಯೆ

ನವದೆಹಲಿ, ಆ. ೨೪- ದೇಶದಲ್ಲಿ ಏಕರೂಪ ತೆರಿಗೆಯ ಹರಿಕಾರ, ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕ, ಪಕ್ಷದಲ್ಲಿ `ಚಾಣಕ್ಯ’ನೆಂದು ಪ್ರಸಿದ್ಧಿ ಪಡೆದಿದ್ದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ (66) ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.
ಉಸಿರಾಟ, ಹೃದಯ ಸಂಬಂಧಿ ಹಾಗೂ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಜೇಟ್ಲಿ ಆ. 9 ರಂದು ದೆಹಲಿಯ ಅಖಿಲ ಭಾರತೀಯ ವಿಜ್ಞಾನಸಂಸ್ಥೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 12 ಗಂಟೆ 7 ನಿಮಿಷದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಬಿಜೆಪಿಯ ಮತ್ತೊಂದು ಹಿರಿಯ ಕೊಂಡಿ ಕಳಚಿ ಬಿದ್ದಂತಾಗಿದೆ.

  •  ಅನಾರೋಗ್ಯದಿಂದ ಅರುಣ್‌ಜೇಟ್ಲಿ ನಿಧನ.
  •  ಕೇಂದ್ರದಲ್ಲಿ ಹಲವು ಖಾತೆಗಳ ನಿರ್ವಹಣೆ.
  •  ದೇಶದಲ್ಲಿ ಏಕರೂಪದ ತೆರಿಗೆ ಪರಿಚಯಿಸಿದ ಅಧಿಕಾರ.
  •  ಬಿಜೆಪಿಯ ಆಧಾರಸ್ಥಂಭಗಳಲ್ಲಿ ಓರ್ವರಾಗಿದ್ದ ಜೇಟ್ಲಿ.
  •  ಉಸಿರಾಟ ಮತ್ತು ಆರೋಗ್ಯ ಸಮಸ್ಯೆಯಿಂದ ಮಧ್ಯಾಹ್ನ ನಿಧನ.

ವರ್ಷದಿಂದೀಚೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವ ಅನಂತ್‌ಕುಮಾರ್, ಇತ್ತೀಚೆಗಷ್ಟೆ ಮಾಜಿ ಕೇಂದ್ರ ಸಚಿವೆ ಸುಷ್ಮಾಸ್ವರಾಜ್ ನಿಧನರಾಗಿದ್ದರು. ಇದೀಗ ಅರುಣ್ ಜೇಟ್ಲಿ ನಿಧನ ಬಿಜೆಪಿ ಪಾಳಯಕ್ಕೆ ಬರಸಿಡಿಲು ಬಡಿದಂತಾಗಿದೆ.

1999ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಹಾಗೂ ಕಾನೂನು ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅರುಣ್‌ಜೇಟ್ಲಿ 2000 ಇಸವಿಯಲ್ಲಿ ಗುಜರಾತ್‌ನಿಂದ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಆ ಬಳಿಕ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಿದ್ದರು.

2014ರಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವ ಖಾತೆ ವಹಿಸಿಕೊಳ್ಳುವುದಕ್ಕೂ ಮುನ್ನ ದೆಹಲಿಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಹಾಗೂ ಬಿಸಿಸಿಐನ ಉತ್ತರ ವಲಯದ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕೆಲಸ ಮಾಡುವ ಜತೆಗೆ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ ಹಾಗೂ ಹಲವು ರಾಜ್ಯಗಳಲ್ಲಿ ಉಸ್ತುವಾರಿಯಾಗಿ ಕಟ್ಟಿ ಬೆಳೆಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.

ಈ ಕಾರಣಕ್ಕಾಗಿಯೇ ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆದಿಯಾಗಿ ಎಲ್ಲ ನಾಯಕರ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.

ವಕೀಲರಾಗಿದ್ದ ಮಹಾರಾಜ್ ಕಿಶನ್ ಜೈಟ್ಲಿ ಮತ್ತು ರತನ್‌ಪ್ರಭಾ ಜೇಟ್ಲಿ ದಂಪತಿಯ ಪುತ್ರರಾಗಿ 1952, ಡಿ. 28 ರಂದು ದೆಹಲಿಯಲ್ಲಿ ಜನಿಸಿದ ಅರುಣ್ ಜೇಟ್ಲಿ, 1969ರಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದರು. 1977ರಲ್ಲಿ ಎಲ್‌ಎಲ್‌ಬಿ ಉತ್ತೀರ್ಣಗೊಂಡು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದರು.
1974ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅರುಣ್ ಜೇಟ್ಲಿ, 1977ರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದರು.

1991ರಲ್ಲಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದ ಅರುಣ್ ಜೇಟ್ಲಿ, ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, 1999ರಲ್ಲಿ ಪಕ್ಷದ ವಕ್ತಾರರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.

ನಡೆದು ಬಂದ ಹಾದಿ
1952 ಡಿ. 22 ರಂದು ದೆಹಲಿಯಲ್ಲಿ ಜನಿಸಿದ್ದ ಅರುಣ್ ಜೇಟ್ಲಿ, ಎಬಿವಿಪಿ ಮೂಲಕ ಗುರುತಿಸಿಕೊಂಡು ಬಿಜೆಪಿಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಜತೆಗೆ ಕೇಂದ್ರಸರ್ಕಾರದಲ್ಲಿ ಹಣಕಾಸು, ರಕ್ಷಣೆ, ವಾರ್ತಾ ಮತ್ತು ಪ್ರಸಾರ, ಕಾನೂನು ನ್ಯಾಯ, ಬಂಡವಾಳ ಹಿಂತೆಗೆತ ಸಚಿವ ಕಾರ್ಪರೇಟ್ ಮತ್ತು ಹಡಗು ಸಚಿವ ಸೇರಿದಂತೆ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

* 1999 ಅ. 13ರಂದು ವಾಜಪೇಯಿ ಸಮ್ಮುಖದಲ್ಲಿ ಮೊದಲ ಬಾರಿಗೆ ಮಾಹಿತಿ ಮತ್ತು ಪ್ರಸಾರಖಾತೆ ರಾಜ್ಯ ಸಚಿವ.
* ಮರು ವರ್ಷವೇ ಬಂಡವಾಳ ಹಿಂತೆಗೆತ ಖಾತೆಯ ಜವಾಬ್ದಾರಿ.
* ಕಾನೂನು, ನ್ಯಾಯ ಖಾತೆ ಜವಾಬ್ದಾರಿ ಹೆಗಲಿಗೆ.
* 2003ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ
* 2014ರಲ್ಲಿ ರಕ್ಷಣೆ, ಹಣಕಾಸು ಸಚಿವರಾಗಿ ಕಾರ್ಯನಿರ್ವಹಣೆ.

 

Leave a Comment