ಬಾಲ್ಯವಿವಾಹ ತಡೆಗೆ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯ

ಕಲಬುರಗಿ,ಫೆ.14-ಬಾಲ್ಯವಿವಾಹ ತಡೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇತರೆ ಇಲಾಖೆಗಳ ನಡುವೆ ಸಮನ್ವಯತೆ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ.ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ನಿಷೇಧ ಹಾಗೂ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳಿಗಾಗಿ ನಗರದ ಜಿಲ್ಲಾ ಪಂಚಾಯತಿ ಹೊಸ ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗೀಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಾಲ್ಯವಿವಾಹ ತಡೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕಲಬುರಗಿ ವಿಭಾಗದಲ್ಲಿ ಇನ್ನೂ ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿವೆ.  18 ವರ್ಷದೊಳಗಿನ ಹೆಣ್ಣು ಮತ್ತು 21 ವರ್ಷದೊಳಗಿನ ಗಂಡಿನ ನಡುವೆ ನಡೆಯುವ ಮದುವೆ. ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನವರಾಗಿಲ್ಲದಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹವೆಂದು ಪರಿಗಣಿಸಲಾಗುತ್ತದೆ. ಬಾಲ್ಯವಿವಾಹ ನಡೆಸಿದರೆ ಮಗುವಿನ ಪೋಷಕರು, ಸಂರಕ್ಷಕರು ಮತ್ತು ಅರ್ಚಕರು ಸಹ ತಪ್ಪಿತಸ್ಥರಾಗುತ್ತಾರೆ. ಇವರಿಗೆ ಕಾನೂನಾರಿತ್ಯ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ, 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದಾಗಿದೆ ಎಂದರು.

2001ರ ಜನಗಣತಿಯ ಪ್ರಕಾರ ದೇಶದಲ್ಲಿ 15 ವರ್ಷದೊಳಗಿನ 15 ಲಕ್ಷ ಹೆಣ್ಣುಮಕ್ಕಳು ಬಾಲ್ಯವಿವಾಹವಾಗಿದ್ದಾರೆ. ಬಾಲ್ಯವಿವಾಹದಿಂದಾಗಿ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ರಕ್ತಹೀನತೆ ಉಂಟಾಗುತ್ತದೆ. ಕಡಿಮೆ ತೂಕದ ಹಾಗೂ ವಿಕಲಾಂಗ ಮಗುವಿನ ಜನನದ ಸಾಧ್ಯತೆ ಇರುತ್ತದೆ. ಶಿಶು ಮರಣ ಹಾಗೂ ಮಕ್ಕಳ ಮರಣ ಹೆಚ್ಚಾಗುತ್ತದೆ ಎಂದು ಹೇಳಿದರು.

ಇಲಾಖೆಗಳ ನಡುವೆ ಹೊಂದಾಣಿಕೆ, ಸಮನ್ವಯತೆ ಇಲ್ಲದೇ ಹೋದಲ್ಲಿ ಈ ಪಿಡುಗನ್ನು ತೊಲಗಿಸಲು ಸಾಧ್ಯವಿಲ್ಲ. ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಎಲ್ಲರು ಕೈ ಜೋಡಿಸಿದರೆ ಮಾತ್ರ ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ ಎಂದರು.

ಯಾದಗಿರಿ ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ಅವರು ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ 270 ಪ್ರಕರಣಗಳು ದಾಖಲಾಗಿದ್ದು, 130 ಬಾಲ್ಯ ವಿವಾಹ ತಡೆಯಲಾಗಿದೆ. ಬಹಳಷ್ಟು ಸುಳ್ಳು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಕ್ಕಳ ಅನೈತಿಕ ಸಾಗಾಣಿಕೆಗೆ ಸಂಬಂಧಪಟ್ಟಂತೆ ಒಂದು ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ಬಾಲ್ಯವಿವಾಹ ನಿಷೇಧ ಕಾಯ್ದೆಯ ಅನುಷ್ಠಾನ ಸರಿಯಾದ ರೀತಿಯಲ್ಲಿ ಆಗದೇ ಇರುವುದರಿಂದ ಮತ್ತು ಜನರ ಮಾನಸಿಕ ಸ್ಥಿತಿ ಬದಲಾಗದೇ ಇರುವುದರಿಂದ ಬಾಲ್ಯ ವಿವಾಹ ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಜನರ ಮನಸ್ಥಿತಿ ಬದಲಾದರೆ ಮತ್ತು ಕಾಯ್ದೆಯನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದರೆ ಬಾಲ್ಯವಿವಾಹ ತಡೆಯಬಹುದಾಗಿದೆ ಎಂದರು. ಇದು ಕೇವಲ ಒಂದು ಇಲಾಖೆಗೆ ಸಂಬಂಧಪಟ್ಟ ಕೆಲಸವಲ್ಲ. ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮತ್ತು ಜನ ಕೈಜೋಡಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಕೆ.ಎಂ.ರೇವತಿ, ಉಪ ನಿರ್ದೇಶಕಿ ಹಲಿಮಾ ಕೆ., ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹರೀಶ ಜೋಗಿ, ಇಂದಿರಾ, ಸಿಸ್ಟರ್ ರೀನಾ ಡಿಸೋಜಾ ವೇದಿಕೆ ಮೇಲಿದ್ದರು.

ಜಿ.ಎಸ್.ಗುಣಾರಿ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಸಿರಸಗಿ ವಂದಿಸಿದರು.

ಕಲಬುರಗಿ ವಿಭಾಗದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Leave a Comment