ಬಾಲ್ಯವಿವಾಹ ಆರಂಭಿಕ ಹಂತದಲ್ಲಿಯೇ ತಡೆಗಟ್ಟಿ

ಪಿರಿಯಾಪಟ್ಟಣ, ಜ.12- ಶಾಲಾ ಕಾಲೇಜುಗಳಲ್ಲಿ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆಗಬೇಕಿವೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಐ.ಎಸ್.ಇಂದಿರಾ ತಿಳಿಸಿದರು.
ಅವರು ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬಾಲ್ಯವಿವಾಹ ಪದ್ದತಿ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತಾದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಬಾಲ್ಯವಿವಾಹದಿಂದ ಎದುರಾಗುವ ತೊಂದರೆಗಳ ಬಗ್ಗೆ ಪೋಷಕರಿಗೆ ತಿಳುವಳಿಕೆ ನೀಡುವ ಮೂಲಕ ಬಾಲ್ಯವಿವಾಹವನ್ನು ಆರಂಭಿಕ ಹಂತದಲ್ಲಿಯೇ ತಡೆಗಟ್ಟುವ ಪ್ರಯತ್ನ ಮಾಡಬೇಕಿದೆ ಎಂದರು. ತಾಲ್ಲೂಕು ಮಟ್ಟದ ಪ್ರತಿಯೊಬ್ಬ ಅಧಿಕಾರಿಗಳಿಗೆ ಬಾಲ್ಯವಿವಾಹ ನಿಷೇಧದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಮಿಕ ನಿರೀಕ್ಷಕ ಅರುಣ್‍ಕುಮಾರ್ ಮಾತನಾಡಿ ಸಿಡಿಮದ್ದು ತಯಾರಿಕೆ, ಆಟೊಮೊಬೈಲ್ಸ್ ಉದ್ಯಮ, ಮದ್ಯಮಾರಾಟ ಕೇಂದ್ರ, ಮತ್ತಿತರ ಅಪಾಯಕಾರಿ ಉದ್ಯಮಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಬಳಸಿಕೊಂಡಲ್ಲಿ ಮಾಲೀಕರಿಗೆ ರೂ.50 ಸಾವಿರದವರೆಗೆ ದಂಡ ಹಾಗೂ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದರು. ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಸಿಡಿಪಿಒ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದ್ದು ಬಾಲಕಾರ್ಮಿಕ ಪದ್ಧತಿ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಮಾಜಕಲ್ಯಾಣಾಧಿಕಾರಿ ರಾಮೇಗೌಡ, ಮಹಿಳಾ ಸಂರಕ್ಷಣಾಧಿಕಾರಿ ಪಿ.ಎಸ್.ಆಶಾ, ಸಿಡಿಪಿಓ ಮೇಲ್ವಿಚಾರಕಿ ಶ್ವೇತ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಪ್ರಕಾಶ್, ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಮೀನಾಕ್ಷಿ, ವಿವಿಧ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.

Leave a Comment