ಬಾಲಿಶವಾಗಿ ಕಳೆದುಹೋದ ವರ್ಧನ

ಚಿತ್ರ : ವರ್ಧನ
ನಿರ್ಮಾಪಕ : ಕೆ. ಸುಧಾಕರ್
ನಿರ್ದೇಶನ : ನಾಗೇಂದ್ರ ಅರಸ್
ತಾರಾಗಣ : ಹರ್ಷ, ನೇಹ ಪಾಟೀಲ್, ಪದ್ಮಜಾರಾವ್, ಚಿಕ್ಕಣ್ಣ, ಪೆಟ್ರೋಲ್ ಪ್ರಸನ್ನ, ಯತಿರಾಜ್ ಮುಂತಾದವರು.
ರೇಟಿಂಗ್ : **

ಪೊಲೀಸ್ ತರಬೇತಿ ಮುಗಿದು ಇನ್ನೇನು ಪೊಲೀಸ್ ಅಧಿಕಾರಿಯಾಗಿ ನೇಮಕಗೊಳ್ಳಬೇಕೆನ್ನುವಾಗ ಹರ್ಷನನ್ನು ಅತ್ಯುತ್ತಮ ಅಭ್ಯರ್ಥಿ ಎಂದು ಗುರುತಿಸಿದ್ದ ಅಧಿಕಾರಗಳೇ ಭ್ರಷ್ಟಚಾರಕ್ಕೆ ಒಳಗಾಗಿ ನೇಮಕಾತಿ ಮಾಡುವುದಿಲ್ಲ. ಇದರಿಂದ ಅವರ ದುಷ್ಟಮುಖವನ್ನು ಬಯಲಿಗೆಳೆಯುತ್ತೇನೆಂದು ಹೊರಡುವ ಹರ್ಷನಿಗೆ ಹಿಂದಿನಿಂದ ಗುಂಡು ಹಾರಿಸಲಾಗುತ್ತದೆ. ಈ ಘಟನೆಗೆ ಒಟ್ಟಿಗೆ ತರಬೇತಿ ಪಡೆದ ಸ್ನೇಹಿತರು ಅದೂ ಅನಾಥನಾದರೂ ಯಾವ ಕೊರತೆಯೂ ಇಲ್ಲದಂತೆ ಹರ್ಷ ನೋಡಿಕೊಂಡಿದ್ದ ವರ್ಧನನ ಮುಂದೆ ನಡೆಯುತ್ತದೆ. ಹರ್ಷನ ತಾಯಿ ಮಗ ತನ್ನ ಕಣ್ಣಮುಂದೆಯೇ ಸಾವಿಗೀಡಾಗುವ ಆಘಾತವನ್ನು ತಡೆಯಲಾಗದೆ ಹಿಂದಿನ ನೆನಪುಗಳನ್ನೇ ಕಳೆದುಕೊಳ್ಳುತ್ತಾಳೆ. ಆಗ ಹರ್ಷನ ತಾಯಿಯನ್ನು ತನ್ನ ತಾಯಿಯಂತೆ ನೋಡಿಕೊಳ್ಳಲು ನಿರ್ಧರಿಸುವ ವರ್ಧನ ತನ್ನ ನೇಮಕಾತಿ ಆದೇಶವನ್ನೇ ಹರಿದುಹಾಕುತ್ತಾನೆ. ಜೊತೆಗೆ ಅವನೇ ಹರ್ಷನಾಗುತ್ತಾನೆ ತಾಯಿಯ ಸೇವೆ ಮಾಡುವ ಸಲುವಾಗಿ ದೊಡ್ಡ ತ್ಯಾಗ ಮಾಡುತ್ತಾನೆ.
ಇದು ಚಿತ್ರದ ಕೊನೆಯ ಕಾಲುಭಾಗದಲ್ಲಿ ನಡೆಯುವ ಕಥೆ. ಇದನ್ನು ತಿಳಿದುಕೊಳ್ಳಲು ಮುಕ್ಕಾಲು ಭಾಗ ಕಾಯುವ ತಾಳ್ಮೆಯನ್ನು ಪ್ರೇಕ್ಷಕರು ವಹಿಸಬೇಕಾಗುತ್ತದೆ.
ಒಳ್ಳೆ ಕತೆಯ ಸಣ್ಣ ಎಳೆ ಇದೆ ಹಾಗೆ ಒಳ್ಳೆಯ ನಟ ಹರ್ಷರನ್ನು ಉತ್ತಮವಾಗಿ ಬಳಸಿಕೊಳ್ಳುವ ಸಾಧ್ಯತೆ ಇದ್ದರೂ ನಿರ್ದೇಶಕ ನಾಗೇಂದ್ರ ಅರಸ್ ವಿಫಲರಾಗಿದ್ದಾರೆ. ನಾಯಕಿ ತನ್ನನ್ನು ಇಷ್ಟಪಡುವ ವರ್ಧನ್ ಒಬ್ಬ ಭೂಗತ ಜಗತ್ತಿನವನಾಗಿ ಹೊಡೆದಾಟ, ಕೊಲೆ ಮಾಡುವಂಥ ಶೌರ್ಯದವನಾಗಿರಬೇಕೆಂದು ಬಯಸುತ್ತಾಳೆ. ಈ ಕಾರಣಕ್ಕೆ ಹರ್ಷನಾದ ವರ್ಧನ್ ತನ್ನ ಸ್ನೇಹಿತನಾದ ಸಿನೆಮಾ ನಿರ್ದೇಶಕನಿಂದ ಡೀಲ್ ಮಾಡುವ, ಎದುರಾಳಿ ರೌಡಿ ಗ್ಯಾಂಗ್ ಸದೆ ಬಡೆಯುವ, ಕೊಲ್ಲುವ ದೃಶ್ಯಗಳನ್ನು ಕಟ್ಟುತ್ತಾನೆ. ಆದರೆ ವರ್ಧನ ನಿಜವಾದ ರೌಡಿ ಕೊಲೆ ನಡೆದಾಗ ಕೊಲೆಗಾರನಂತೆ ಸಿಕ್ಕಿಬೀಳುತ್ತಾನೆ. ಇಂಥ ಸಂಬಂಧವೇ ಇಲ್ಲವೇನೋ ಎನ್ನುವಂಥ ಕಥೆ ಬಾಲಿಶವಾಗಿ ಮುಕ್ಕಾಲು ಚಿತ್ರ ನಡಯುತ್ತದೆ. ಹರ್ಷ ಅವರ ನಟನೆ, ಡಾನ್ಸ್, ಫೈಟ್ಸ್ ಉತ್ತಮವಾಗಿದೆ. ನೇಹ ಪಾಟೀಲ್ ನಿರ್ದೇಶಕರು ಹೇಳಿಕೊಟ್ಟಿದ್ದನ್ನು ಕೃತಕವಾಗಿ ಒಪ್ಪಿಸಿದ್ದಾರೆನಿಸುತ್ತದೆ. ಇದ್ದಿದ್ದರಲ್ಲಿ ಇಷ್ಟವಾಗುವುದೆಂದರೆ ಚಿತ್ರದ ಹಾಡುಗಳು ಮತ್ತು ಡಾನ್ಸ್.

Leave a Comment