ಬಾಲಿವುಡ್ ನಟರಿಗೆ ಮೋದಿ ಮಣೆ: ಜಗ್ಗೇಶ್, ಖುಷ್ಬು, ವಾಗ್ದಾಳಿ

ಬೆಂಗಳೂರು, ಅ. ೨೧- ಶಾರುಖ್ ಖಾನ್, ಅಮೀರ್ ಖಾನ್ ಮಾತ್ರ ಕಲಾರಂಗಕ್ಕೆ ಒಡೆಯರು ಅಲ್ಲ. ಕನ್ನಡದ ಕಲಿಗಳು ಅನೇಕರಿದ್ದಾರೆ. ಉತ್ತರ ಭಾರತದ ನಟ-ನಟಿಯರಿಗೆ ನಾವು ಯಾವುದರಲ್ಲೂ ಕಮ್ಮಿ ಇಲ್ಲ. ನಮ್ಮ ಭಾವನೆಯನ್ನು ಗೌರವಿಸಿ.
ಹೀಗಂತ ನಟ ಜಗ್ಗೇಶ್ ಪ್ರಧಾನಿ ನರೇಂದ್ರಮೋದಿ ಅವರಿಗೆ ಟ್ವೀಟ್ ಮಾಡಿ ಅಸಮಾಧಾನ, ಅತೃಪ್ತಿ ಹೊರ ಹಾಕಿದ್ದಾರೆ.
ಮಹಾತ್ಮಗಾಂಧೀಜಿ ಅವರ ೧೫೦ನೇ ಜನ್ಮದಿನದ ಅಂಗವಾಗಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಬಾಲಿವುಡ್ ಮಂದಿಯ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಚಿತ್ರರಂಗದ ಸಹಕಾರ ಬೇಕು ಎಂದು ಕಡೆಗಣಿಸಿದ್ದರು.
ಚಿತ್ರರಂಗದ ಕಲಾವಿದರ ಸಂವಾದ ಕಾರ್ಯಕ್ರಮಕ್ಕೆ ಬಾಲಿವುಡ್ ಚಿತ್ರರಂಗದ ಕಲಾವಿದರನ್ನಷ್ಟೇ ಆಹ್ವಾನಿಸಿ ದಕ್ಷಿಣ ಭಾರತದ ಚಿತ್ರರಂಗವನ್ನು ಕಡೆಗಣಿಸಿದ್ದ ಪ್ರಧಾನಿ ಮೋದಿ ಅವರಿಗೆ ಜಗ್ಗೇಶ್ ಟ್ವೀಟ್ ಮೂಲಕ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರು ಇಂದು ಬಹುತೇಕ ಪರಭಾಷಾ ನಟರುಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಉತ್ತರ ಭಾರತದ ನಟ-ನಟಿಯರಿಗೆ ನಾವು ಯಾವುದರಲ್ಲೂ ಕಡಿಮೆ ಇಲ್ಲ. ಇಂದು ಕರ್ನಾಟಕ ಮನರಂಜನಾ ತೆರಿಗೆಯಲ್ಲಿ ಹೆಚ್ಚು ಸಂಗ್ರಹಿಸುತ್ತಿದೆ. ಕನ್ನಡದ ನೆಲ ಚಿತ್ರರಂಗದಿಂದ ಎನ್ನುವುದನ್ನು ನೆನಪಿನಲ್ಲಿಡಬೇಕು. ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಮಾತ್ರ ಅಲ್ಲ. ಈ ವಿಷಯ ಮನವರಿಕೆ ಮಾಡಿಕೊಡುವ ಕನ್ನಡದ ಮನಸ್ಸುಗಳು ಇಲ್ಲವೆ ಎನ್ನುವುದು ದುಃಖದ ಸಂಗತಿ. ಬರೀ ಖಾನ್‌ಗಳು ಚಿತ್ರರಂಗವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ತೆಲುಗು ಚಿತ್ರರಂಗದ ನಟ ರಾಮ್ ಚರಣ್ ತೇಜಾ ಅವರ ಪತ್ನಿ ಉಪಾಸನಾ ಅವರು ಸಂವಾದ ಕಾರ್ಯಕ್ರಮಕ್ಕೆ ಬಾಲಿವುಡ್ ನಟ-ನಟಿಯರನ್ನು ಆಹ್ವಾನಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರೀತಿಯ ನರೇಂದ್ರಮೋದಿಅವರೇ ದಕ್ಷಿಣ ಭಾರತದಲ್ಲೂ ಚಿತ್ರರಂಗದ ಕಲಾವಿದರಿದ್ದಾರೆ. ನಿಮ್ಮನ್ನು ನಾವು ಪ್ರಧಾನಿಯನ್ನಾಗಿ ಪಡೆಯಲು ಹೆಮ್ಮೆ ಪಡುತ್ತೇವೆ. ಆದರೆ, ಬರೀ ಬಾಲಿವುಡ್ ಮಂದಿಯನ್ನು ಮಾತ್ರ ಪರಿಗಣಿಸುವ ಮೂಲಕ ದಕ್ಷಿಣ ಭಾರತ ಚಿತ್ರರಂಗವನ್ನು ನಿರ್ಲಕ್ಷಿಸಿದ್ದೀರಿ. ಇದು ನೋವಿನ ಸಂಗತಿ ಎಂದು ತಮ್ಮ ಅಭಿಪ್ರಾಯವನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.
ತಮಿಳು ನಟಿ ಖುಷ್ಬು ಅವರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ತೀವ್ರವಾಗಿ ವಿರೋಧಿಸಿ ಚಿತ್ರ ರಂಗವೆಂದರೆ ಬರೀ ಬಾಲಿವುಡ್ ಎನ್ನುವುದನ್ನು ಬಿಡಿ, ದಕ್ಷಿಣ ಭಾರತ ಚಿತ್ರರಂಗದಲ್ಲೂ ಘಟಾನುಘಟಿ ನಾಯಕ, ನಾಯಕಿರಿದ್ದಾರೆ ಎಂದು ಹೇಳಿದ್ದಾರೆ.

Leave a Comment