ಬಾಲಿವುಡ್‌ನ ಸಂಗೀತ ನಿರ್ದೇಶಕ ವಾಜಿದ್‌ ಖಾನ್‌ ವಿಧಿವಶ

 

ಮುಂಬೈ, ಜೂ ೧- ಕನ್ನಡದ ರಾಜನ್-ನಾಗೇಂದ್ರ, ದೊರೈ-ಭಗವಾನ್ ಜೋಡಿಯಂತೆಯೇ  ಬಾಲಿವುಡ್ ನಲ್ಲಿ ಗಮನ ಸೆಳೆದಿದ್ದ  ಸಂಗೀತ ನಿರ್ದೇಶಕರಾದ ಸಾಜಿದ್-ವಾಜಿದ್ ಜೋಡಿಯಲ್ಲಿ ಒಬ್ಬರಾದ ವಾಜಿದ್ ಖಾನ್  ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ ಕೆಲವು ದಿನಗಳ ಹಿಂದಷ್ಟೇ ಕೊರೋನಾ ಇರುವುದು ದೃಢಪಟ್ಟಿತ್ತು.

42 ವರ್ಷದ ವಾಜಿದ್ ಗೆ ತಿಂಗಳುಗಳ ಹಿಂದಷ್ಟೇ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದಿತ್ತು. ಇದೀಗ ಕೊರೋನಾ ಬಳಿಕ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯೂ ಉಲ್ಬಣಿಸಿತ್ತು ಎನ್ನಲಾಗಿದೆ. ವಾಜೀದ್ ಕೊರೊನಾ ಧೃಡಪಟ್ಟ ಹಿನ್ನಲೆಯಲ್ಲಿ  ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತೀವ್ರ ಅನಾರೋಗ್ಯದಿಂದಾಗಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಗೀತ ನಿರ್ದೇಶಕರ ಜೋಡಿ 1998 ರಲ್ಲಿ ಸಲ್ಮಾನ್ ಖಾನ್ ಅವರ ಸಿನಿಮಾ ಪ್ಯಾರ್ ಕಿಯಾ ತೋ ಡರ್ನ ಕ್ಯಾ.. ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟರು. ನಂತರದ ದಿನಗಳಲ್ಲಿ ತೇರೆ ನಾಮ್, ಗರ್ವ್, ದಬಾಂಗ್ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ವಾಜಿದ್ ಖಾನ್ ಗಾಯಕರು ಕೂಡ ಹೌದು. ಫೆವಿಕಾಲ್ ಸೆ, ಚಿಂತಾ ತಾ ಚಿತ ಚಿತ, ಪ್ಯಾಟ್ ಕೊರೊನಾ… ಸೇರಿದಂತೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಸಹೋದರ ಸಾಜಿದ್ ಜೊತೆಯಾಗಿ ಸೇರಿ 2012 ರಲ್ಲಿ ಸರಿಗಮಪ ಕಾರ್ಯಕ್ರಮದ ಜಡ್ಜ್ ಆಗಿದ್ದರು. ಈ ಸಾಜಿದ್-ವಾಜಿದ್ ಜೋಡಿ ಐಪಿಎಲ್ ನ ಧೂಮ್ ಧೂಮ್ ಧಮಾಕ ಹಾಡನ್ನು ಸಹ ಸಂಯೋಜಿಸಿದ್ದರು.

va1

ಅಮಿತಾಭ್ ಬಚ್ಚನ್ ಅವರು .. “ವಾಜಿದ್ ಖಾನ್ ಅವರ ಅಗಲಿಕೆ ಬಹಳ ಆಘಾತ ತಂದಿದೆ. ಎಂದಿಗೂ ನಗುತ್ತಿದ್ದ ಅದ್ಭುತ ಪ್ರತಿಭೆ ಇನ್ನಿಲ್ಲ. ನಮ್ಮ ಪ್ರಾರ್ಥನೆಯಲ್ಲಿ ಸದಾ ಇರಲಿದ್ದಾರೆ..” ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ನನ್ನ ಸಹೋದರ ವಾಜಿದ್ ನಮ್ಮನ್ನೆಲ್ಲ ಬಿಟ್ಟು ಹೋದರು..” ಎಂಬ ಶ್ವೇರ್ಷಿಕೆಯೊಂದಿಗೆ ವಾಜಿದ್ ಅವರ ಜೊತೆಗಿನ ಫೋಟೊ ಒಂದನ್ನು ಶೇರ್ ಮಾಡುವ ಮೂಲಕ ಬಾಲಿವುಡ್‌ ಹಿನ್ನಲೆ ಗಾಯಕ ಸೋನು ನಿಗಮ್ ಅವರು ಸಂತಾಪ ಸೂಚಿಸಿದ್ದಾರೆ.

ವಾಜಿದ್ ಅವರಿಗೆ ವಿವಿಧ ಆರೋಗ್ಯ ಸಮಸ್ಯೆಗಳಿದ್ದವು, ಕಿಡ್ನಿ ಸಮಸ್ಯೆಯಿಂದಾಗಿ ಕೆಲ ತಿಂಗಳುಗಳ ಹಿಂದೆ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಕಿಡ್ನಿ ಇನ್ಫೆಕ್ಷನ್ ಆಯಿತು. ಹಾಗಾಗಿ ಅವರನ್ನು ಚೆಂಬುರ್ ನಲ್ಲಿರುವ ಸುರಾಣಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಇದ್ದರು, ನಂತರ ಆರೋಗ್ಯದ ಸ್ಥಿತಿ ಗಂಭೀರವಾಯಿತು..” ಎಂದು  ಮತ್ತೊಬ್ಬ ಸಂಗೀತ ನಿರ್ದೇಶಕ    ಸಲೀಂ ತಿಳಿಸಿದ್ದಾರೆ.

“ಭಯಾನಕ ಸುದ್ದಿ. ವಾಜಿದ್ ಎಂದರೆ ನನಗೆ ನೆನಪಾಗುವ ಒಂದು ವಿಷಯ ಅವರ ನಗು. ಯಾವಾಗಲೂ ನಗುನಗುತ್ತಾ ಇದ್ದರು. ಬಹಳ ಬೇಗ ಹೊರಟು ಹೋದರು. ಅವರ ಕುಟುಂಬಕ್ಕೆ ಮತ್ತು ದುಃಖದಲ್ಲಿರುವ ಎಲ್ಲರಿಗೂ ನನ್ನ ಸಂತಾಪ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನನ್ನ ಪ್ರಾರ್ಥನೆಯಲ್ಲಿ ನೀವು ಇರಲಿದ್ದೀರಿ..” ಎಂದು ಬರೆದ ಪ್ರಿಯಾಂಕ  ಚೋಪ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ ನಟರಾದ ಸಲ್ಮಾನ್‌ ಖಾನ್‌, ಅಕ್ಷಯ್‌ ಕುಮಾರ್‌, ಶಾರೂಖ್‌ ಖಾನ್‌, ದೀಪಿಕಾ ಪಡುಕೋಣೆ ಮತ್ತಿತರರ ವಾಜಿದ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Share

Leave a Comment