ಬಾಲನ್ ಡಿ’ಒರ್ ಪ್ರಶಸ್ತಿಗೆ ಮುತ್ತಿಟ್ಟ ಮೊದಲ ಕ್ರೊವೇಶಿಯಾ ಆಟಗಾರ ಲೂಕಾ

ಪ್ಯಾರಿಸ್, ಡಿ ೪- ಫುಟ್ಬಾಲ್ ದಂತಕತೆಗಳನ್ನು ಹಿಂದಿಕ್ಕಿದ ಕ್ರೊವೇಷಿಯಾ ಮಿಡ್ ಫೀಲ್ಡರ್ ಲೂಕಾ ಮೋಡ್ರಿಕ್ ೨೦೧೮ನೇ ಸಾಲಿನ ಬಾಲನ್ ಡಿಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಭಾಜನರಾದ ಮೊಟ್ಟಮೊದಲ ಕ್ರೊವೇಶಿಯಾ ಆಟಗಾರ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಫುಟ್ಬಾಲ್ ದಂತಕತೆಗಳಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಅವರ ದಾಖಲೆಯನ್ನು ಮುರಿದು ಲೂಕಾ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ೨೦೦೭ರಿಂದ ಈಚೆಗೆ ರೊನಾಲ್ಡೊ ಮತ್ತು ಮೆಸ್ಸಿಯನ್ನು ಹೊರತುಪಡಿಸಿ ಇತರೆ ಯಾವ ಆಟಗಾರರು ಈ ಪ್ರಶಸ್ತಿಯನ್ನು ಪಡೆದಿರಲಿಲ್ಲ.

luka೩೩ ವರ್ಷದ ಮೊಡ್ರಿಕ್ ೨೦೧೮ರ ಫಿಫಾ ವಿಶ್ವಕಪ್ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು. ಜೊತೆಗೆ ಈ ವರ್ಷದ ಫಿಫಾ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗೆದ್ದ ಬೆನ್ನಲ್ಲೇ ಲೂಕಾ ಅವರಿಗೆ ಈ ಪ್ರಶಸ್ತಿ ದಕ್ಕಿದೆ. ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆ ನೀಡುವ ಈ ಪ್ರಶಸ್ತಿಯನ್ನು ನಿನ್ನೆ ಪ್ರದಾನ ಮಾಡಲಾಗಿದ್ದು. ವಿಶ್ವದ್ಯಾದಂತ ಕ್ರೀಡಾ ಪತ್ರಕರ್ತರು ಮತದಾನ ಮಾಡುವ ಮೂಲಕ ೩೦ ಫುಟ್ಬಾಲ್ ಆಟಗಾರರ ಪಟ್ಟಿಯಿಂದ ಲೂಕಾ ಅವರನ್ನು ಆಯ್ಕೆ ಮಾಡಿದ್ದಾರೆ.

ಲೂಕಾ ಅವರಿಗೆ ೭೫೩ ಅಂಕಗಳು ಲಭಿಸಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ೪೭೬ ಅಂಕಗಳು ಸಿಗುವ ಮೂಲಕ ಎರಡನೇ ಸ್ಥಾನದಲ್ಲಿ ಇದ್ದಾರೆ. ಅಂಟೊಯಾನ್ ಗ್ರೀಸ್ ಮ್ಯಾನ್ ೪೧೪ ಅಂಕ ಹಾಗೂ ಫ್ರಾನ್ಸ್ ಆಟಗಾರ ಕಿಲಿಯನ್ ಎಂಬೊಪೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೆಸ್ಸಿ ಮತ್ತು ರೊನಾಲ್ಡೊ ಗೈರಾಗಿದ್ದರು.

ಫುಟ್ಬಾಲ್ ದಂತಕತೆಗಳೊಂದಿಗೆ ನಾನು ಸೇರಿರುವುದು ಅತೀವ ಆನಂದ ತಂದಿದೆ. ಇನ್ನು ಮುಂದೆ ಅದ್ಬುತ ಆಟಗಾರರ ಗುಂಪಿನ ಭಾಗವಾಗಲು ಇನ್ನೂ ಪ್ರಯತ್ನ ಮುಂದುವರೆಸುತ್ತೇನೆ. ಈ ಬಾರಿ ಪ್ರಶಸ್ತಿ ನನಗೆ ಬಂದಿದೆ ಎಂದರೆ ನಾನು ಈ ವರ್ಷ ಉತ್ತಮವಾಗಿ ಆಡಿದ್ದೇನೆ ಎಂದರ್ಥ. ೨೦೧೮ರ ವರ್ಷ ನನ್ನದಾಯಿತು ಎಂದು ಮೊಡ್ರಿಕ್ ಪ್ರತಿಕ್ರಿಯಿಸಿದ್ದಾರೆ.

Leave a Comment