ಬಾಲಕ-ಬಾಲಕಿ ಅಪಹರಣ : ಪತ್ತೆಗೆ ಮನವಿ

ರಾಯಚೂರು.ಸೆ.11- ನಗರದ ಜಹೀರಾಬಾದ್ ಬಡಾವಣೆಯಲ್ಲಿ ಅಪ್ರಾಪ್ತ ಬಾಲಕಿ, ಬಾಲಕ ಅಪಹರಣಗೊಂಡು 2 ತಿಂಗಳು ಗತಿಸಿದರೂ, ಇದುವರೆಗೂ ಅವರ ಸುಳಿವು ಪತ್ತೆ ಹಚ್ಚಿಲ್ಲವೆಂದು ಸಫಾಯಿ ಕರ್ಮಚಾರಿ ಸದಸ್ಯ ಭಾಸ್ಕರ್ ರಾವ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಅವರಿಗೆ ದೂರು ನೀಡಿದರು.
ಅವರಿಂದು ಸ್ಥಳೀಯ ಸ್ಪಂದನಾ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಲಾಗಿರುವ ಜನ ಸ್ಪಂದನಾ ಸಭೆಯಲ್ಲಿ ಭಾಗವಹಿಸಿ ದೂರು ನೀಡಿದರು. ಜೂನ್ 21 ರಂದು ಬಾಲಕ, ಬಾಲಕಿ ಅಪಹರಣಗೊಂಡಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ, ಇದುವರೆಗೂ ಈ ಬಗ್ಗೆ ಯಾವುದೇ ಸುಳಿವು ಪತ್ತೆಹಚ್ಚಿಲ್ಲ. ಶೀಘ್ರ ಅವರನ್ನು ಪತ್ತೆಹಚ್ಚಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶೀಘ್ರವೇ ಬಾಲಕ, ಬಾಲಕಿಯನ್ನು ಪತ್ತೆಹಚ್ಚುವುದಾಗಿ ಭರವಸೆ ನೀಡಿದರು. ವಸಂತಕುಮಾರ ಅವರು ಹೊಸದಾಗಿ ಪೆಟ್ರೋಲ್ ಬಂಕ್ ಆರಂಭಿಸಲು ಪರವಾನಿಗೆ ಪಡೆಯಲು ಎಸ್ಪಿ ಕಛೇರಿಯಿಂದ ಎನ್‌ಓಸಿ ನೀಡಬೇಕೆಂದು ಮನವಿ ಮಾ‌ಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈಗಾಗಲೇ ಕಛೇರಿಯಿಂದ ಕೇಟು ಅವರಿಗೆ ಪತ್ರ ಬರೆಯಲಾಗಿದೆಂದು ತಿಳಿಸಿದರು.
ಪ್ರತಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಏರ್ಪಡಿಸುವ ಜನ ಸ್ಪಂದನಾ ಸಭೆಗೆ ಸಾರ್ವಜನಿಕರು ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಇಲಾಖೆ ಅಧಿಕಾರಿಗಳು ಹಾಜರಾಗಬೇಕೆಂದು ತಿಳಿಸಿದರು. ಅಲ್ಲದೆ, ಈ ಬಾರಿ ಜಿಲ್ಲೆಯಾದ್ಯಂತ 1762 ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ವಿಸರ್ಜನೆ ದಿನದಂದು ಧ್ವನಿವರ್ಧಕಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅನ್ಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ, ತೆಲಂಗಾಣ ಡಿಜೆ ಮಾಲೀಕರಿಗೆ ಸೂಚಿಸಲಾಗಿದೆ.
ದೇವದುರ್ಗ ತಾಲೂಕಿನಲ್ಲಿ ಪತ್ತೆಯಾದ ನಕಲಿ ನೋಟು ಪ್ರಕರಣ ತನಿಖೆ ಹಂತದಲ್ಲಿದೆಂದು ತಿಳಿಸಿದರು.

Leave a Comment