ಬಾಲಕಿ ಮೇಲೆ ಅತ್ಯಾಚಾರ ತಾಯಿ ಹತ್ಯೆ ಮಾಡಿದ ಆರೋಪಿಗಳು

ಕಾನ್ಪುರ, ಜ. ೧೮- ಉನ್ನಾವೊ ಸಂತ್ರಸ್ಥೆ ಪ್ರಕರಣ ಇನ್ನು ಜನಮಾನಸದಿಂದ ದೂರವಾಗುವ ಮುನ್ನವೇ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಬಂಧಿತರಾಗಿದ್ದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಬಾಲಕಿಯ ತಾಯಿಯನ್ನು ಸಾರ್ವಜನಿಕರೆದುದೇ ಭೀಕರವಾಗಿ ಥಳಿಸಿ ಕೊಲೆಗೈದಿರುವ ಹೃದಯವಿದ್ರಾವಕ ಘಟನೆ ಕಾನ್ಪುರದಲ್ಲಿ ನಡೆದಿದೆ.
ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಆರು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಜೈಲು ಪಾಲಾಗಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಪೊಲೀಸರಿಗೆ ದೂರು ನೀಡಿದ್ದ ಸಂತ್ರಸ್ಥ ಬಾಲಕಿಯ ತಾಯಿಯ ಮೇಲೆ ಜ. 8 ರಂದು ಸಾರ್ವಜನಿಕವಾಗಿ ಥಳಿಸಿ ಕೊಲೆ ಗೈದಿದ್ದಾರೆ.
ಸಂತ್ರಸ್ಥ ಬಾಲಕಿಯ ತಾಯಿಯ ಜತೆ ಇದ್ದ ಮತ್ತೋರ್ವ ಮಹಿಳೆಯನ್ನೂ ದುಷ್ಕರ್ಮಿಗಳು ಥಳಿಸಿ ಗಾಯಗೊಳಿಸಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ಥ ಬಾಲಕಿಯ ತಾಯಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ದೂರದ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2018ರಲ್ಲಿ 13 ವರ್ಷದ ಬಾಲಕಿಯನ್ನು 6 ಮಂದಿ ದುಷ್ಕರ್ಮಿಗಳು ಅಪಹರಿಸಿ ಅತ್ಯಾಚಾರವೆಸಗಲಾಗಿತ್ತು. ಈ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಅದಾದ ಕೆಲವು ದಿನಗಳ ನಂತರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಪ್ರಕರಣ ಹಿಂಪಡೆಯುವಂತೆ ಸಂತ್ರಸ್ಥ ಬಾಲಕಿಯ ತಾಯಿಯ ಮೇಲೆ ಒತ್ತಡ ಹೇರಿದ್ದರು. ಅದಕ್ಕೆ ಒಪ್ಪದಿದ್ದಾಗ ಆಕೆಯನ್ನೂ ಮತ್ತು ಆಕೆಯ ದೂರದ ಸಂಬಂಧಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ನಿನ್ನೆ ಸಂಜೆ ಮೃತಪಟ್ಟಿದ್ದಾರೆ. ಈ ಅಕೃತ್ಯದ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Leave a Comment