ಬಾಲಕಿಯ ಅತ್ಯಾಚಾರ ರೌಡಿ ಪರಾರಿ

ಮಂಗಳೂರು, ಜ.೧೨- ನಗರದ ಕುಖ್ಯಾತ ರೌಡಿಶೀಟರ್ ಒಬ್ಬ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಮೂರು ದಿನಗಳ ಕಾಲ ಅತ್ಯಾಚಾರಗೈದ ಪರಿಣಾಮ ಆಕೆ ತೀವ್ರ ಅಸ್ವಸ್ಥಳಾಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಗೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಆರೋಪಿ ಆಕಾಶಭವನ ಶರಣ್(೩೬) ತಲೆಮರೆಸಿಕೊಂಡಿದ್ದಾನೆ. ಅಸ್ವಸ್ಥ ಬಾಲಕಿಯನ್ನು ಸರಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದು ವೈದ್ಯರು ಅತ್ಯಾಚಾರ ನಡೆದಿರುವುದು ದೃಢಪಡಿಸಿದ್ದು ಬಳಿಕ ಪಾಂಡೇಶ್ವರ ಮಹಿಳಾ ಠಾಣಾ ಪೊಲೀಸರಿಗೆ ದೂರು ನೀಡಿದಿದ್ದಾರೆ.

ಆರೋಪಿ ಆಕಾಶಭವನ ಶರಣ್ ಮೇಲೆ ೫ ಕೊಲೆ, ಒಂದು ಕೊಲೆಯತ್ನ, ದರೋಡೆ, ವೃದ್ಧೆಯ ಅತ್ಯಾಚಾರ, ಕಳವು, ಹಲ್ಲೆ ಪ್ರಕರಣಗಳೂ ಸೇರಿದಂತೆ ೨೦ಕ್ಕೂ ಹೆಚ್ಚು ಪ್ರಕರಣಗಳು ನಗರವ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಆರೋಪಿ ಕೆಲತಿಂಗಳ ಹಿಂದಷ್ಟೇ ಜೈಲಿನಿಂದ ಹೊರಬಂದಿದ್ದು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ನಗರದಲ್ಲಿ ಹುಲಿ ಕುಣಿತತರಬೇತಿ ನೀಡುತ್ತಿದ್ದ ಶರಣ್ ತನ್ನ ಕ್ಲಾಸ್‌ಗೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದ ಎನ್ನಲಾಗಿದೆ. ಕಳೆದ ಡಿ.೩೧ರಂದು ಬಾಲಕಿಯನ್ನು ಮಣಿಪಾಲದ ಪಬ್‌ಗೆ ಕರೆದೊಯ್ದಿದ್ದ ಆತ ಅಲ್ಲಿ ಆಕೆಗೆ ಅಮಲು ಬರಿಸಿ ಅತ್ಯಾಚಾರವೆಸಗಿದ್ದ. ಬಳಿಕ ಉಡುಪಿ ಹಾಗೂ ಮಂಗಳೂರಿನ ಲಾಡ್ಜ್‌ಗಳಲ್ಲಿ ನಿರಂತರ ಮೂರು ದಿನಗಳ ಕಾಲ ಇರಿಸಿ ಅತ್ಯಾಚಾರವೆಸಗಿದ್ದ. ಇದರಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದು ಆಕೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ಬಿಟ್ಟು ತಲೆಮರೆಸಿದ್ದ. ಎರಡು ಪೊಲೀಸ್ ತಂಡಗಳು ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿವೆ.

Leave a Comment