ಬಾಲಕಾರ್ಮಿಕ ಪದ್ಧತಿ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸಿ: ಬಿ.ಸಿ ಬಿರಾದಾರ್

ಬಳ್ಳಾರಿ, ಜೂ.14: ರಾಜ್ಯವನ್ನು ಬರುವ 2025ರೊಳಗಾಗಿ ಬಾಲ ಕಾರ್ಮಿಕ ಪದ್ಧತಿ ಮುಕ್ತವಾಗಿ ಮಾಡಲು ಸಾರ್ವಜನಿಕರು, ಪೋಷಕರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಿ.ಸಿ ಬಿರಾದಾರ್ ಕರೆ ನೀಡಿದರು.

ಅವರು ನಿನ್ನೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ಬಂಡಿಹಟ್ಟಿ ರಮಾಲದೇವಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಭಾರತದ ಜನಸಂಖ್ಯೆ ಆಧಾರದಲ್ಲಿ ಶೇ.37ರಷ್ಟು ಮಕ್ಕಳಿದ್ದಾರೆ ಅವರಿಗೆ ಶಿಕ್ಷಣ ಕೊಡಿಸಿ ಜವಾಬ್ದಾರಿ ಹೆಚ್ಚಿಸಿ ಭಾರತದ ನಿರ್ಮಾಣದಲ್ಲಿ ಭಾಗಿಯಾಗಬೇಕು. ಇದರಿಂದ ದೇಶದಲ್ಲಿ ನಿರ್ಮಾಣವಾಗಿರುವ ಬಾಲ ಕಾರ್ಮಿಕ ಪದ್ಧತಿಯನ್ನು ದೂರವಾಗಿಸಲು ಪಣತೋಡಬೇಕು ಎಂದು ಸಲಹೆ ನೀಡಿದರು.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಅರ್ಜುನ್ ಎಸ್. ಮಲ್ಲೂರ್ ಚಾಲನೆ ನೀಡಿದರು. ಜಾಥವು ಬಂಡಿಹಟ್ಟಿಯ ಶ್ರೀ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಕೇಂದ್ರಿಯ ವಿದ್ಯಾಲಯ ರಸ್ತೆ ಮಾರ್ಗವಾಗಿ ಬಂಡಿಹಟ್ಟಿಯ ಶ್ರೀ ರಮಾಲದೇವಿ ದೇವಸ್ಥಾನಕ್ಕೆ ತಲುಪಿತು, ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಯ ಕುರಿತು ಅಧ್ಯಕ್ಷರು, ಅಧಿಕಾರಿಗಳು ಸೇರಿದಂತೆ ಮಕ್ಕಳು ಪ್ರತಿಜ್ಞಾವಿಧಿ ಭೋಧಿಸಲಾಯಿತು.

ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಐಲಿ ಪ್ರಾಸ್ತವಿಕವಾಗಿ ಮಾತನಾಡಿದರು. ಎಚ್.ಸಿ. ರಾಘವೇಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ ಕುಮಾರ್ ಕೆ.ಎಚ್, ವೈದ್ಯಾಧಿಕಾರಿ ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ಅಂಕಲಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಮೊದಲಾದವರು ಇದ್ದರು.

Leave a Comment