ಬಾರ್ ಮಾಲಕನ ಹತ್ಯೆ: ಸೂತ್ರಧಾರಿ ಸೆರೆ

ಎಕೆಎಂಎಸ್ ಬಸ್ ಮಾಲಕನೂ ಶಾಮೀಲು!

ಉಡುಪಿ, ಫೆ.೧೫- ನವೀಮುಂಬೈಯ ‘ಮಾಯಾ’ ಬಾರ್ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್(೪೫) ಕೊಲೆ ಪ್ರಕರಣದ ಪ್ರಮುಖ ಆರೋಪಿ, ಸೂತ್ರಧಾರ ಎಕೆಎಂಎಸ್ ಬಸ್ ಮಾಲಕ ಸೈಫ್ ಆಲಿಯಾಸ್ ಸೈಫುದ್ದೀನ್ ಎಂಬಾತನನ್ನು ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದ ತಂಡ ನಿನ್ನೆ ಸಂಜೆ ಬಂಧಿಸಿದೆ.

ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳಾದ ಸುಮಿತ್ ಮಿಶ್ರಾ, ಅಬ್ದುಲ್ ಶುಕೂರ್ ಯಾನೆ ಅದ್ದು, ಅವಿನಾಶ್ ಕರ್ಕೇರ, ಮುಹಮ್ಮದ್ ಶರೀಫ್ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಸೈಫುದ್ದೀನ್‌ನನ್ನು ಮಲ್ಪೆಯ ಕೊಡವೂರಿನ ಆತನ ಮನೆಯಿಂದ ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ತಿಳಿಸಿದ್ದಾರೆ.. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಫೆ.೨೭ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮಾಯಾ ಬಾರ್‌ನಲ್ಲಿ ಸೈಫುದ್ದೀನ್ ಮತ್ತು ಅಕ್ರಂ ಪಾಲುದಾರರಾಗಿದ್ದಾರೆ. ಮುಂಬೈದಿಂದ ಉಡುಪಿಗೆ ಬಂದಿದ್ದ ವಶಿಷ್ಠ ಇವರಿಬ್ಬರ ಜೊತೆ ಇದ್ದ. ವಿಡಿಯೋ ಕರೆ ಮಾಡಿ ಇದನ್ನು ಆತ ಹೇಳಿದ್ದಾಗಿ ವಶಿಷ್ಟನ ಪತ್ನಿ ತನ್ನ ಹೇಳಿಕೆಯಲ್ಲಿ ಪೊಲೀಸರಿಗೆ ತಿಳಿಸಿದ್ದರು. ಪಾಲುದಾರಿಕೆ ಸಂಬಂಧಿಸಿದ ಹಣಕಾಸಿನ ವಿಚಾರವೇ ಕೊಲೆಗೆ ಕಾರಣ ಎಂಬುದು ತಿಳಿದುಬಂದಿದೆ. ಅಕ್ರಂ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Comment