ಬಾರ್‌ನಲ್ಲಿ ದಾಂಧಲೆ ೯ ಮಂದಿಗೆ ನ್ಯಾ.ಸೆರೆ

ಮಂಗಳೂರು, ಫೆ.೨೫- ಬಾರ್‌ನಲ್ಲಿ ಕಂಠಪೂರ್ತಿ ಕುಡಿದು ಬಿಲ್ ಕೊಡದೆ ದಾಂಧಲೆ ನಡೆಸಿ ವಸ್ತುಗಳನ್ನು ಹಾನಿಗೊಳಿಸಿದ ವಿಚಾರದಲ್ಲಿ ೯ ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕಾಸರಗೋಡು ಮೂಲದ ವಿಜಯ ಸಿ. ಹೆಚ್(೨೯), ಉಮೇಶ್(೨೨), ಅನ್ವಿತ್ ಪಿ(೧೯), ಉದಯ ಕೆ. ಎಂ(೩೧), ಮಿಥುನ್ ರಾಜ್ ಎಂ(೨೧), ಉದಯ ಎಸ್(೨೪), ಲೋಕೇಶ್ ಕೆ(೨೬), ತರುಣ್ ರಾಜ್ ಪಿ(೨೫), ಆದರ್ಶ್ ಎಚ್(೨೦) ಬಂಧಿತ ಆರೋಪಿಗಳಾಗಿದ್ದಾರೆ.
ಬೊಬ್ಬೆಕೇರಿಯ ಬಾರ್‌ನಲ್ಲಿ ಮದ್ಯ ಖರೀದಿಸಿ, ಬಿಲ್ ಕೊಡದೆ ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಮೇಲೆ ದಾಳಿಗೆ ಗುಂಪು ಕಟ್ಟಿಕೊಂಡು ದಾಂಧಲೆ ನಡೆಸಿದ್ದಾರೆ. ವಸ್ತುಗಳನ್ನು ಹಾನಿ ಮಾಡಿದ ಬಗ್ಗೆ ಬಾರ್‌ನವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬಂದು ಕಾನೂನು ಬಾಹಿರ ಚಟುವಟಿಕೆ ನಡೆಸಿ ತಲೆಮರೆಸಿಕೊಳ್ಳುತ್ತಿದ್ದ ಪ್ರಕರಣಗಳು ಹಿಂದಿನಿಂದಲೂ ನಡೆಯುತ್ತಲೇ ಇದೆ. ಈ ಬಾರಿ ಎಸ್‌ಐ ವಿನೋದ್ ಎಸ್. ಮತ್ತು ತಂಡ ತಕ್ಷಣ ಕಾರ್ಯ ಪ್ರವೃತ್ತರಾಗಿ ಆರೋಪಿಗಳ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Leave a Comment