ಬಾಯಲ್ಲಿ ಬಂದೂಕ್ ಇಟ್ಟು ಶೂಟ್ ಮಾಡಿ: ಕೊಲೆ

ಕರಜಗಿಯಲ್ಲಿ

 

 

ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಂಬಂಧಿಯೊಬ್ಬರ ಬಾಯಲ್ಲಿ ರಿವಾಲ್ವರ ಇಟ್ಟು ಶೂಟ್ ಮಾಡಿ, ಕೊಲೆ ಮಾಡಿರುವ ಘಟನೆ ನಡೆದಿದೆ.

 

ಗ್ರಾಮದ ಸಾಯಬಣ್ಣ ತಳವಾರ (28) ಹತ್ಯೆಗೀಡಾದ ಯುವಕ. ಹತ್ತಿರದ ಸಂಬಂಧಿಯೆಂದು ಹೇಳಲಾಗುತ್ತಿರುವ ರವಿ ಅಲಿಯಾಸ್ ಅಭಿಷೇಕ ಎನ್ನುವ ಯುವಕ ಹತ್ಯೆಗೈದು ಪರಾರಿಯಾಗಿರುವ ಆರೋಪಿಯೆಂದು ಪೋಲಿಸರು ತಿಳಿಸಿದ್ದಾರೆ.

 

ಸಾಯಬಣ್ಣ ತಳವಾರ ಮತ್ತು ಆರೋಪಿ ಅಭಿಷೇಕ ಸಂಜೆ ಗ್ರಾಮದ ಮಹಾರಾಷ್ಟ್ರ ಬ್ಯಾಂಕ್ ಎದುರಿನ ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಭಿಷೇಕ ಎನ್ನುವ ಯುವಕ ಸಾಯಬಣ್ಣನನ್ನು ನೆಲಕ್ಕೆ ಕೆಡವಿ ಬಾಯಲ್ಲಿ ರಿವಾಲ್ವರ ಇಟ್ಟು ಶೂಟ್ ಮಾಡಿದ್ದಾನೆಂದು ಹೇಳಲಾಗುತ್ತಿದ್ದು, ಗಂಭೀರ ಗಾಯಗೊಂಡಿದ್ದ ಸಾಯಬಣ್ಣ ತಳವಾರ ರಕ್ತದ ಮಡುವಿನಲ್ಲಿ ಬಿದ್ದು, ಒದ್ದಾಡುತ್ತಿದ್ದಾಗ ತಕ್ಷಣ ಆತನನ್ನು ಅಂಬುಲೆನ್ಸ್ ಮೂಲಕ ಕಲಬುರಗಿಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಸಾಯಬಣ್ಣ ತಳವಾರ ಮೃತಪಟ್ಟಿದ್ದಾನೆ.

 

ಇನ್ನೂ ಘಟನೆಯ ಬೆನ್ನಲ್ಲೆ ಆರೋಪಿ ಅಭಿಷೇಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಸಿ.ಪಿ.ಐ ಮಹಾಂತೇಶ ಪಾಟೀಲ, ಪಿ.ಎಸ್.ಐ ಮಂಜುನಾಥ ಹೂಗಾರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು, ಆತನ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ. ಅಲ್ಲದೆ ಕೊಲೆ ಆರೋಪಿ ಅಭಿಷೇಕನ ಸ್ನೇಹಿತ ಎಂದು ಹೇಳಲಾಗುವ ದತ್ತು ಎಂಬಾತನನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಆತನ ವಿಚಾರಣೆ ನಡೆಸಿದ್ದಾರೆ. ಕೊಲೆ ಆರೋಪಿ ಅಭಿಷೇಕ ಜಮಾದಾರ ಇತನು ಅಕ್ರಮ ಪಿಸ್ತೂಲ್ ಮಾರಾಟ ಮಾಡುವ ದಂಧೆಯಲ್ಲಿ ಸಕ್ರೀಯನಾಗಿದ್ದ. ನೆರೆಯ ವಿಜಯಪುರ ಮತ್ತು ಇಂಡಿ ಪೋಲಿಸ್ ಠಾಣೆಗಳಲ್ಲಿ ಇತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಅಕ್ರಮ ಶಸ್ತಾಸ್ತ್ರ ಹೊಂದಿರುವ ಹಿನ್ನೆಲೆಯಲ್ಲಿ ಮೂರ್ನಾಲ್ಕು ಬಾರಿ ಜೈಲಿಗೆ ಹೋಗಿ ಬಂದಿದ್ದ. ಅಭಿಷೇಕ ಜಮಾದಾರ ಯಾವಾಗಲೂ ತನ್ನ ಜೇಬಿನಲ್ಲಿ ರಿವಾಲ್ವರ ಇಟ್ಟುಕೊಂಡೆ ಓಡಾಡುತ್ತಿದ್ದ ಎಂದು ಸ್ಥಳೀಯರು ಹೇಳುತ್ತಾರೆ.

 

Leave a Comment