ಬಾಬರಿ ಹಕ್ಕನ್ನು ಮುಸ್ಲಿಮರು ಬಿಡಬೇಕು- ಶಿಯಾ ಧರ್ಮಗುರು

ಮುಂಬೈ, ಆ. ೧೩- ಬಾಬರಿ ಮಸೀದಿಯ ಮೇಲಿನ ಹಕ್ಕನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಶಿಯಾ ಸಮುದಾಯದ ಹಿರಿಯ ಧಾರ್ಮಿಕ ಗುರುವೊಬ್ಬರು ಹೇಳಿದ್ದಾರೆ.

ಈ ವಿವಾದದಲ್ಲಿ ಎರಡೂ ಕೋಮುಗಳ ನಡುವೆ ಶಾಂತಿ ನೆಲೆಸಲು ಮುಸ್ಲಿಮರು ತಮ್ಮ ಪಾಲಿನ ಹಕ್ಕನ್ನು ಬಿಟ್ಟುಕೊಡಲು ಮುಂದಾಗಬೇಕು ಎಂದು ಶಿಯಾ ಸಮುದಾಯದ ಹಿರಿಯ ಧಾರ್ಮಿಕ ಗುರು ಮೌಲಾನಾ ಕಲ್ಬೆಸಿದ್ದಕಿ ಇಂದಿಲ್ಲಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ಈಗ ಸುಪ್ರೀಂ ಕೋರ್ಟ್ ತ್ವರಿತ ವಿಚಾರಣೆ ನಡೆಸುತ್ತಿದೆ. ಒಂದು ವೇಳೆ ತೀರ್ಪು ಮುಸ್ಲಿಂ ವಿರೋಧವಾಗಿದ್ದರೆ ಅದನ್ನು ಮುಸ್ಲಿಮರು ಸಮಾಧಾನದಿಂದ ಒಪ್ಪಿಕೊಳ್ಳಬೇಕು. ಹಾಗೆಯೇ ಒಂದು ವೇಳೆ ಸುಪ್ರೀಂ ಆದೇಶ ಮುಸ್ಲಿಮರ ಪರವಾಗಿ ಬಂದರೂ, ಆಗಲೂ ತಮ್ಮ ಹಕ್ಕನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂದು ಹೇಳಿರುವ ಸಿದ್ದಕಿ, ಒಬ್ಬರಿಗೆ ಆಪ್ತವಾದದ್ದನ್ನು ಬಿಟ್ಟುಕೊಡುವ ಮೂಲಕ ಅದಕ್ಕಿಂತ ಸಾವಿರ ಪಾಲು ಲಾಭ ಪಡೆಯಬಹುದು ಎಂದೂ ಹೇಳಿದ್ದಾರೆ.

ಈಗಾಗಲೇ ಶಿಯಾ ವಕ್ಫ್ ಮಂಡಳಿ ಬಾಬರಿ ಮಸೀದಿಯನ್ನು ರಾಮಮಂದಿರದಿಂದ ದೂರದಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಬಾಬರಿ ಮಸೀದಿ ತಮಗೆ ಸೇರಿದ್ದು, ಈ ಕುರಿತಂತೆ ತೀರ್ಮಾನಿಸುವ ಹಕ್ಕು ತಮಗಿದೆ ಎಂದು ಶಿಯಾ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಪ್ರಮಾಣ ಪತ್ರದಲ್ಲಿ ಹೇಳಿದೆ.

Leave a Comment