ಬಾಬರಿ ಮಸೀದಿ ಧ್ವಂಸ: ವರದಿ ನೀಡಲು ಸುಪ್ರೀಂ ಸೂಚನೆ

ನವದೆಹಲಿ, ಸೆ. ೧೦- ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು 2019ರ ಏ. 19ರ ವೇಳೆಗೆ ಹೇಗೆ ಮುಗಿಸುತ್ತೀರಿ ಎಂಬುದರ ಸಲ್ಲಿಸುವಂತೆ ಲಕ್ನೋ ನ್ಯಾಯಾಲಯದ ಸೆಷನ್ ನ್ಯಾಯಾಧೀಶರನ್ನು ಸುಪ್ರೀಂ ನ್ಯಾಯಪೀಠ ಕೇಳಿದೆ.

ಭಾರತೀಯ ಜನತಾ ಪಕ್ಷದ ಹಿರಿಯ .ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾಭಾರತಿ ಅವರು ಆರೋಪಿ ಸ್ಥಾನದಲ್ಲಿರುವ ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ತಾನು ನಿರ್ದೇಶಿಸಿರುವಂತೆ ಏ. 19, 2019ರ ಒಳಗೆ ಪೂರ್ಣಗೊಳಿಸುವ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಲಕ್ನೋ ನ್ಯಾಯಾಲಯದ ನ್ಯಾಯಮೂರ್ತಿಯನ್ನು ಇಂದು ಸುಪ್ರೀಂ ನ್ಯಾಯಪೀಠ ಕೇಳಿದೆ.

ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಇಂದು ಮಲ್ಹೋತ್ರ ಅವರು ಇದ್ದರು. ಇದೇ ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ಕೆ ಯಾದವ್ ಅವರ ಬಡ್ತಿಯನ್ನು ವಿಚಾರಣೆ ಮುಕ್ತಾಯದವರೆವಿಗೂ ತಡೆಹಿಡಿದಿರುವ ಅಲಹಾಬಾದ್ ಹೈಕೋರ್ಟಿನ ಕ್ರಮದ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂ ನ್ಯಾಯಪೀಠ ಕೇಳಿದೆ.

ಏ. 19, 1917ರಲ್ಲಿ ಈ ಪ್ರಕರಣ ಕುರಿತಂತೆ ನಿರ್ದೇಶನ ನೀಡಿದ್ದ ಸುಪ್ರೀಂಕೋರ್ಟ್, ಈ ಪ್ರಕರಣದ ವಿಚಾರಣೆ ಏ. 19, 2019 ಒಳಗೆ ಮುಗಿಯಬೇಕು. ಪ್ರತಿದಿನ ಇದರ ವಿಚಾರಣೆ ನಡೆಯಬೇಕು. ಒಂದೂ ದಿನವು ವಿಚಾರಣೆಯನ್ನು ಅನಿವಾರ್ಯ ಕಾರಣವಿಲ್ಲದೆ ಮುಂದೂಡಬಾರದು ಎಂದಿತ್ತು.

Leave a Comment