ಬಾಡಿಗೆ ತಾಯಿ ಮಸೂದೆ, 2019ಕ್ಕೆ ಸಂಪುಟ ಅನುಮೋದನೆ

ನವದೆಹಲಿ, ಫೆ 26  ವಾಣಿಜ್ಯ ಉದ್ದೇಶಕ್ಕೆ ಬಾಡಿಗೆ ತಾಯಿ ಯೋಜನೆಗೆ ನಿರ್ಬಂಧ ಹೇರಿದ್ದರೂ, ಬಂಜೆತನದ ಸಮಸ್ಯೆ ಎದುರಿಸುತ್ತಿರುವ ದಂಪತಿಗೆ ಪರಹಿತ ಚಿಂತನೆಯ ಬಾಡಿಗೆ ತಾಯಿ (ಅಲ್ಟ್ರೂಸ್ಟಿಕ್) ಯೋಜನೆಗೆ ಅವಕಾಶ ನೀಡುವ ಬಾಡಿಗೆ ತಾಯಿ (ನಿಯಂತ್ರಣ ಮಸೂದೆ) 2019ಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿತು.
ಸುದ್ದಿಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದ ಸಂಪುಟ ಸಭೆಯ ವಿವರಗಳ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಬಂಜೆತನ ಎದುರಿಸುತ್ತಿರುವ ದಂಪತಿ ಸಮಾಜದಲ್ಲಿ ಎದುರಿಸುತ್ತಿರುವ ಅವಮಾನಗಳನ್ನು ತಡೆಯಲು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಈ ಮಸೂದೆ ಬಾಡಿಗೆ ತಾಯಿ ಉದ್ಯಮವನ್ನು ನಿಯಂತ್ರಿಸಲು, ಮುಖ್ಯವಾಗಿ ಬಾಡಿಗೆ ತಾಯಂದಿರನ್ನು ಶೋಷಣೆಯಿಂದ ರಕ್ಷಿಸುವ ಗುರಿ ಹೊಂದಿದೆ ಎಂದು ವಿವರಿಸಿದರು.
ಸಂತಾನೋತ್ಪತ್ತಿಗೆ ನೆರವಾಗುವ ತಂತ್ರಜ್ಞಾನದ ನಿಯಂತ್ರಣ (ಎಆರ್ ಟಿ ) ಮಸೂದೆ ಮತ್ತು ಬಾಡಿಗೆ ತಾಯಿ ಮಸೂದೆ ಸೇರಿದಂತೆ ಎರಡು ಮಹಿಳಾ ಪರ ಮಸೂದೆಗಳಿಗೆ ಸಂಪುಟದಲ್ಲಿ ಅನುಮೋದನೆ ದೊರೆತಿರುವುದು, ಓರ್ವ ಮಹಿಳೆಯಾಗಿ ನನಗೆ ತುಂಬಾ ಹೆಮ್ಮೆ ತಂದಿದೆ ಎಂದು ಸ್ಮೃತಿ ಇರಾನಿ ಹೇಳಿದರು.

Leave a Comment