ಬಾಗ್ದಾದ್‌ನಲ್ಲಿ ಕಾರ್ ಬಾಂಬ್ ಸ್ಫೋಟಕ್ಕೆ ೫೫ ಮಂದಿ ಬಲಿ

ಬಾಗ್ದಾದ್,ಫೆ.೧೭- ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ೫೫ ಮಂದಿ ಸಾವನ್ನಪ್ಪಿದ್ದು, ೬೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಬಾಗ್ದಾದ್‌ನ ದಕ್ಷಿಣ ಭಾಗದಲ್ಲಿ ನಡೆದಿದೆ.

ದಾಳಿಯ ಬಗ್ಗೆ ಆಂತರಿಕ ಸಚಿವಾಲಯದ ವಕ್ತಾರ ಬ್ರಿಗೇಡಿಯರ್ ಜನರಲ್ ಸಾದ್ ಮಾನ್ ಸಾವಿನ ಸಂಖ್ಯೆಯ ಬಗ್ಗೆ ಖಚಿತಪಡಿಸಿದ್ದು, ಶಿಯಾ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಅಲ್-ಬಯಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರರ ಗುಂಪು ಈ ದಾಳಿಯ ಹೊಣೆ ಹೊತ್ತಿದೆ. ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸುನ್ನಿ ಉಗ್ರರು ಹೇಳಿಕೊಂಡಿದ್ದಾರೆ.

ಬಯಾದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಿಂದಾಗಿ ಮೃತಪಟ್ಟ ವ್ಯಕ್ತಿಗಳು, ಗಾಯಗೊಂಡವರ ಆರ್ತನಾದ, ಆಸ್ತಿ-ಪಾಸ್ತಿ ನಷ್ಟದ ಕುರಿತು ಎಲ್ಲರಿಗೂ ಮೊಬೈಲ್ ವಿಡಿಯೋ ದೃಶ್ಯಾವಳಿಗಳನ್ನು ಹರಿಬಿಡಲಾಗಿದೆ.

ಬಯಾದಲ್ಲಿನ ಕಾರು ಮಾರಾಟ ಮಾಡುವ ಶೋ ರೂಂ ಬಳಿ ಈ ಬಾಂಬ್‌ಸ್ಫೋಟ ನಡೆಸಲಾಗಿದೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ದೌಡಾಯಿಸಿದ್ದು, ಮೃತದೇಹಗಳನ್ನು ಹೊರತೆಗೆಯುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಬಯಾನ ಹಲವೆಡೆ ಸ್ಫೋಟ ಸಂಭವಿಸಿದ್ದು, ಪ್ರಸಕ್ತ ವರ್ಷದಲ್ಲಿ ನಡೆದ ಭೀಕರ ದುರ್ಘಟನೆ ಇದಾಗಿದೆ.

ನಿನ್ನೆಯಷ್ಟೇ ಪಾಕಿಸ್ತಾನದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ ೧೦೦ ಮಂದಿ ಸಾವನ್ನಪ್ಪಿದ್ದಾರೆ. ೨೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Leave a Comment