ಬಾಗಲಕೋಟ ನೆರೆಪೀಡಿತ ಪ್ರದೇಶಗಳಿಗೆ ಕೇಂದ್ರ ತಂಡ ಭೇಟಿ

ಬಾಗಲಕೋಟ, ಆ 26: ರಾಜ್ಯದಲ್ಲಿ ಭಾರೀ ಮಳೆ ಹಾಗೂ ನೆರೆಗೆ ತತ್ತರಿಸಿದ್ದ ಪ್ರದೇಶಗಳ ಅಧ್ಯಯನಕ್ಕಾಗಿ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಇಂದು ಬಾಗಲಕೋಟ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿತು.
ಕೇಂದ್ರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದಲ್ಲಿ ನಿನ್ನೆ ಬೆಳಗಾವಿ ಜಿಲ್ಲೆಯಾದ್ಯಂತ ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ತಂಡ ಇಂದು ಬಾಗಲಕೋಟ ಜಿಲ್ಲೆಯ ಜಮಖಂಡಿ, ರಬಕವಿ ಬನಹಟ್ಟಿ, ಮುಧೋಳ, ಬಾಗಲಕೋಟೆ, ಬಾದಾಮಿ ತಾಲೂಕುಗಳಲ್ಲಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಹತ್ವದ ದಾಖಲೆಗಳನ್ನು ಕಲೆ ಹಾಕಿತು.
ಬೆಳಿಗ್ಗೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ನೆರೆಗೆ ತುತ್ತಾಗಿ ನಾಶವಾದ ಸೇತುವೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಅಲ್ಲಿಂದ ರಬಕವಿ ಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ಮನೆಮಠ ಕಳೆದುಕೊಂಡವರ ಕುರಿತು ಪರಿಶೀಲನೆ ನಡೆಸಲಾಯಿತು. ಮನೆ ಮಠ ಕಳೆದುಕೊಂಡಿರುವ ಸಂತ್ರಸ್ತರು ಇನ್ನೂ ಸಂತ್ರಸ್ತರ ಕೇಂದ್ರಗಳಿಗೆ ಭೇಟಿ ನೀಡಿದ ತಂಡ ಖುದ್ದಾಗಿ ಸಂತ್ರಸ್ತರೊಂದಿಗೆ ಮಾತನಾಡಿ ಏನೇನು ಪರಿಹಾರ ನೀಡಬೇಕುಂಬುದನ್ನು ದಾಖಲೆ ಮಾಡಿಕೊಂಡಿತು.
ನಂತರ ಮುಧೋಳ ತಾಲೂಕಿಗೆ ಪ್ರಯಾಣ ಬೆಳೆಸಿ ಮುಧೋಳ ನಗರದಲ್ಲಿ ನೆರೆಗೆ ಸಿಕ್ಕು ಹಾನಿಯಾದ ಯಾದವಾಡ ಸೇತುವೆಯನ್ನು ಪರಿಶೀಲಿಸಿತು. ಅಲ್ಲಿಂದ ಚಿಚಖಂಡಿ ಸೇತುವೆಯ ಹಾನಿ ಬಗ್ಗೆ ಪರಿಶೀಲಿಸಲಾಯಿತು. ಅಲ್ಲಿಯೇ ಸುತ್ತಮುತ್ತಲಿನ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಜಮೀನು ಕಳೆದುಕೊಂಡವರ, ಬೆಳೆನಾಶ ಹಾಗೂ ಜಾನುವಾರುಗಳನ್ನು ಕಳೆದುಕೊಂಡಿರುವ ಸಂತ್ರಸ್ತರ ದು:ಖಕ್ಕೆ ತಂಡ ಸ್ಪಂದಿಸಿತು.
ಚಿಚಖಂಡಿ ಗ್ರಾಮದಿಂದ ಲೋಕಾಪೂರ ಮಾರ್ಗವಾಗಿ ಬಾಗಲಕೋಟೆ ತಾಲೂಕಿನ ಕಲಾದಗಿಗೆ ಭೇಟಿ ನೀಡಿ ಅಲ್ಲಿ ರೈತರು ಬೆಳೆದ ದಾಳಿಂಬೆ ಬೆಳೆ ನೆರೆಗೆ ಸಂಪೂರ್ಣ ನಾಶವಾಗಿದ್ದು, ದಾಳಿಂಬೆ ಬೆಳೆದ ರೈತರ ಸಂಕಷ್ಟಗಳ ಕುರಿತು ಮಾಹಿತಿ ಸಂಗ್ರಹಿಸಿ ರೈತರಿಗೆ ಸಾಂತ್ವನ ಹೇಳಿದ ತಂಡ, ಕೇಂದ್ರಕ್ಕೆ ವರದಿ ನೀಡಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿತು.
ಕಲಾದಗಿಯಿಂದ ಗದ್ದನಕೇರಿ ಮೂಲಕ ಬಾದಾಮಿ ತಾಲೂಕಿನ ನಂದಿಕೇಶ್ವರಕ್ಕೆ ಭೇಟಿ ನೀಡಿ ಅಪಾರ ಪ್ರಮಾಣದ ಬೆಳೆನಾಶವಾದ ಜಮೀನಿನ ರೈತರನ್ನು ಬೇಟಿ ಮಾಡಿದ್ದಲ್ಲದೆ. ಪ್ರವಾಹದಿಂದ ರಸ್ತೆಗಳು, ಮನೆಗಳು, ಜಾನುವಾರುಗಳು ಕೊಚ್ಚಿಹೋದ ಬಗ್ಗೆಯೂ ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಲಾಯಿತು.
ಅಲ್ಲಿಂದ ಐತಿಹಾಸಿಕ ಸ್ಥಳ ಪಟ್ಟದಕಲ್‍ಗೆ ಭೇಟಿ ನೀಡಿ ಪ್ರವಾಹಕ್ಕೆ ತುತ್ತಾಗಿ ಅಪಾರ ಮನೆಗಳು ಇಲ್ಲಿ ನೆಲಕಚ್ಚಿದ್ದು, ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಭೇಟಿ ಮಾಡಿ ಅವರಿಂದ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿತು.
ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡ ಕೇಂದ್ರ ತಂಡ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ, ಸೂಕ್ತ ಪರಿಹಾರಕ್ಕಾಗಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿತು.

Leave a Comment