ಬಾಗಲಕೋಟೆಯಲ್ಲಿ ಮೊದಲ ಕೊರೊನಾ ಪತ್ತೆ

ಬಾಗಲಕೋಟೆ, ಏ 3- ಬಾಗಲಕೋಟೆಯ 75 ವರ್ಷದ ಓರ್ವ ವೃದ್ಧನಿಗೆ ನಿನ್ನೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲ ಪ್ರದೇಶಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.ಬಾಗಲಕೋಟೆ ಜಿಲ್ಲೆಯ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಇದಾಗಿದ್ದು, ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.

ನಗರದ ವಾರ್ಡ ನಂ. 7 ಮತ್ತು ವಾರ್ಡ ನಂ. 14 ರ ವ್ಯಾಪ್ತಿಯ ಪ್ರದೇಶಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದ್ದು, ಈ ಪ್ರದೇಶಗಳಲ್ಲಿ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದ್ದಾರೆ.

ಸೋಂಕು ದೃಢಪಟ್ಟ 75 ವರ್ಷದ ವೃದ್ಧ ವಾರ್ಡ ನಂ. 7 ರ ನಿವಾಸಿಯಾಗಿದ್ದು ಅನಾರೋಗ್ಯದ ನಿಮಿತ್ತ ಈತನನ್ನು ಮಾರ್ಚ 30 ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಂಜೆ ಇವರ ಪರೀಕ್ಷೆಯ ವರದಿ ಬಂದಿದ್ದು, ಸೋಂಕಿತ ವ್ಯಕ್ತಿಯ ಚಿಕಿತ್ಸೆ ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದಿದೆ.

ಸೋಂಕಿತ ವ್ಯಕ್ತಿಯು ದಿನಸಿ, ಎಣ್ಣೆ ವ್ಯಾಪಾರಿಯಾಗಿದ್ದು ಇವರ ಅಂಗಡಿಗೆ ಯಾರಾದರೂ ಈಗಾಗಲೇ ಭೇಟಿ ನೀಡಿ ಅವರಲ್ಲಿ ಕೊರೊನಾ ಲಕ್ಷಣಗಳೇನಾದರೂ ಕಂಡು ಬಂದರೆ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ವರದಿ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಹಾಗೂ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿಯ ಮಗ ಕಳೆದ 10 ದಿನಗಳ ಹಿಂದೆ ಬೆಂಗಳೂರಿನಿಂದ ಮರಳಿದ್ದನೆನ್ನಲಾಗಿದ್ದು, ಇವನ ಸ್ಯಾಂಪಲ್‌ಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಜಿಲ್ಲೆಯ ಇನ್ನೂ 19 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇವರ ವರದಿ ಇನ್ನೂ ಬರಬೇಕಾಗಿದೆ.
ಬಿಗಿ ಭದ್ರತೆ
ಜಿಲ್ಲೆಯಲ್ಲಿ ಕೊರೊನೊ ಪಾಜಿಟಿವ್ ಪ್ರಕರಣ ದೃಢಪಡಿಸುತ್ತಿದ್ದಂತೆ ಹುಬ್ಬಳ್ಳಿ, ವಿಜಯಪುರ ಮತ್ತು ಬೆಳಗಾವಿ ಮುಖ್ಯ ಕ್ರಾಸ್ ಗದ್ದನಕೇರಿ ಕ್ರಾಸ್ ಬಳಿ ಸುಮಾರು 70 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಲಾದಗಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲಿ ಪೋಲೀಸರು ಕಾರ್ಯನಿರತರಾಗಿದ್ದಾರೆ. ಗ್ರಾಮಸ್ಥರಿಗೆ ಸೋಂಕಿನ ಬಗ್ಗೆ ತಿಳಿ ಹೇಳುತ್ತಾ ಯಾರನ್ನೂ ಮನೆಯಿಂದಾಚೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಕಾನೂನು ಬಾಹಿರವಾಗಿ ಸಾರ್ವಜನಿಕರು ಹೊರಗಡೆ ಬಂದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Comment