ಬಾಕ್ಸಿಂಗ್ ಸೆಮಿಫೈನಲ್‌ಗೆ ಮೇರಿ ಕೋಮ್

ರಷ್ಯಾ, ಅ ೧೦- ರಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ೫೧ ಕೆ.ಜಿ ವಿಭಾಗದಲ್ಲಿ ಭಾರತದ ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರು ಸೆಮಿಫೈನಲ್‌ಗೆ ತಲುಪುವ ಆ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. ಇದು ಅವರ ವೃತ್ತಿ ಜೀವನದ ಎಂಟನೇ ಚಾಂಪಿಯನ್‌ಶಿಪ್‌ನ ಪದಕವಾಗಲಿದೆ.

ಇಂದು ನಡೆದ ೫೧ ಕೆ.ಜಿ ವಿಭಾಗದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕೊಲಂಬಿಯಾದ ವ್ಯಾಲೆನ್ಸಿಯಾ ವಿಕ್ಟರ್ ವಿರುದ್ಧ ೫-೦ ಅಂತರದಲ್ಲಿ ಮೇರಿ ಕೋಮ್ ಗೆದ್ದು ಕಂಚಿನ ಪದಕವನ್ನು ಭದ್ರ ಪಡಿಸಿಕೊಂಡಿದ್ದಾರೆ.

ಪಂದ್ಯದ ಆರಂಭದಲ್ಲಿ ಮೇರಿ ಕೋಮ್ ನಿಧಾನಗತಿಯಲ್ಲಿ ಆಡಿದರು. ನಂತರ, ಪುಟಿದೆದ್ದ ಅವರು ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ವಿಕ್ಟರ್ ವಿರುದ್ಧ ಆಕ್ರಮಣಾಕಾರಿ ಆಟವಾಡಿದರು. ಇದರ ಫಲವಾಗಿ ೨೯-೨೮, ೩೦-೨೭, ೨೯-೨೮, ೩೦-೨೭, ೨೯-೨೮ ಅಂತರದಲ್ಲಿ ಗೆದ್ದು ಉಪಾಂತ್ಯಕ್ಕೆ ತಲುಪಿದ್ದಾರೆ.

ಇದಕ್ಕೂ ಮುನ್ನ ಮಣಿಪುರ್ ಬಾಕ್ಸರ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಜುತಾಮಸ್ ಜಿಟ್‌ಪಾಂಗ್ ವಿರುದ್ಧ ೫-೦ ಅಂತರದಲ್ಲಿ ಜಯಬೇರಿ ಬಾರಿಸಿದ್ದರು. ಮೊದಲನೇ ಸುತ್ತಿನಲ್ಲಿ ಮೇರಿ ಬೈ ಪಡೆದುಕೊಂಡಿದ್ದರು. ಶನಿವಾರ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಮೇರಿ ಕೋಮ್ ಅವರು ಎರಡನೇ ಶ್ರೆಯಾಂಕದ ಟರ್ಕಿಯ ಬುಸೆನಾಜ್ ಕಾಕಿರೋಗ್ಲು ವಿರುದ್ಧ ಸೆಣಸಲಿದ್ದಾರೆ. ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎಂಟು ಪದಕ ಪಡೆದ ಭಾರತ ಮಪದಲ ಬಾಕ್ಸರ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ.

Leave a Comment