ಬಾಕ್ಸಿಂಗ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟ ಬಾಕ್ಸರ್ ಅಮಿತ್

ಜಕಾರ್ತ, ಸೆ.೧- ಈ ವರ್ಷದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಸುತ್ತಿಗೆ ತಲುಪಿದ ಏಕೈಕ ಬಾಕ್ಸರ್ ಅಮಿತ್ ಪಾಂಘಲ್ ಇಂದು ನಡೆದ ಫೈನಲ್‌ನಲ್ಲಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

ನಿನ್ನೆ ನಡೆದ ಪುರುಷರ ೪೯ ಕೆಜಿ ಲೈಟ್ ಫ್ಲೈ ವಿಭಾಗದಲ್ಲಿ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಸೆಮಿಫೈನಲ್‌ನಲ್ಲಿ ಅಮಿತ್ ಫಿಲಿಪ್ಪೀನ್ಸ್‌ನ ಪಾಲಮ್ ಕಾರ್ಲೊರನ್ನು ೩-೨ ಅಂತರದಿಂದ ಸೋಲಿಸಿ ಫೈನಲ್ ತಲುಪಿ ಚಿನ್ನದ ಪದಕ ಸುತ್ತಿಗೆ ತಲುಪಿರುವ ಭಾರತದ ಏಕೈಕ ಬಾಕ್ಸರ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಇಂದು ಮಧ್ಯಾಹ್ನ ನಡೆದ ಫೈನಲ್‌ನಲ್ಲಿ ಉಜ್ಬೇಕಿಸ್ತಾನದ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಹಸನ್‌ಬಾಯ್ ದಸ್ಮಟೊವ್ ಸವಾಲುನ್ನು ದಿಟ್ಟವಾಗಿ ಎದುರಿಸಿದ ೨೨ ವರ್ಷದ ಅಮಿತ್ ೩-೨ ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಹರಿಯಾಣದ ಯೋಧ ಅಮಿತ್ ಈ ವರ್ಷಾರಂಭದಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. ಬಲ್ಗೇರಿಯದಲ್ಲಿ ನಡೆದಿದ್ದ ಪ್ರತಿಷ್ಠಿತ ಸ್ಟ್ರಾಂಡ್ಜಾ ಸ್ಮಾರಕ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ವಿಕಾಸ್ ಕ್ರಿಶನ್ ಕಣ್ಣಿನ ಗಾಯದ ಹಿನ್ನೆಲೆಯಲ್ಲಿ ಸೆಮಿ ಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ಅಮಿತ್ ಬಾಕ್ಸಿಂಗ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿದ್ದರು.

Leave a Comment