ಬಾಕಿ ವೇತನ ಪೂರೈಕೆಗೆ ಒತ್ತಾಯ

ರಾಯಚೂರು.ಏ.05- ಗುತ್ತಿಗೆ ಪೌರ ಕಾರ್ಮಿಕರ 7 ತಿಂಗಳ ವೇತನ ಪಾವತಿಗಾಗಿ ಸಚಿವರ ಭೇಟಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಕರ್ನಾಟಕರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು ಕಳೆದ 7 ತಿಂಗಳಿನಿಂದ ನಗರಸಭೆಯಿಂದ ಕಾರ್ಮಿಕರಿಗೆ ಬಾಕಿ ವೇತನ ನೀಡದಿರುವ ಕುರಿತು ಇಂದು ಗುಂಪು ಸೇರಿ ಸಚಿವರ ಭೇಟಿಗೆ ಒತ್ತಾಯಿಸಿದರು.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಗರ ಲಾಕ್‌ಡೌನ್ ಆಗಿರುವುದು ದಿನನಿತ್ಯ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ, ಕುಡಿಯಲು ಶುದ್ಧ ನೀರು ಲಭ್ಯವಾಗುತ್ತಿಲ್ಲ. ಇವರಿಗೆ ಕಡ್ಡಾಯವಾಗಿ ಮಾಸ್ಕ್ , ಗ್ಲೌಸ್, ಶೂಗಳನ್ನು ಪೂರೈಸಬೇಕಾಗಿದೆ. ಕಳೆದ 2 ವರ್ಷಗಳಿಂದ ನಗರಸಭೆಯು ಸಮವಸ್ತ್ರವನ್ನು ನೀಡಿರುವುದಿಲ್ಲ ಹಾಗೂ ಕಳೆದ 7 ತಿಂಗಳಿನಿಂದ ಬಾಕಿ ವೇತನ ಪಾವತಿಯಾಗದೇ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ನಗರಸಭೆ ಪೌರಾಯುಕ್ತರು 180 ಜನಕ್ಕೆ ವೇತನ ಪಾವತಿಯನ್ನು 1 ವಾರದೊಳಗೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆದರೂ ಇದುವರೆಗೂ ವೇತನ ಪಾವತಿ ಮಾಡಿಲ್ಲ. ಸಿಎಂಸಿ ಕಮೀಷನರ್ ಅವರಿಗೆ ಭೇಟಿಯಾದರೆ ನಗರ ಯೋಜನಾಧಿಕಾರಿಯನ್ನು ಭೇಟಿಯಾಗಿ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಇಂದು ನಾವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡದೇ ಇಲ್ಲಿಂದ ತೆರಳುವುದಿಲ್ಲ ಎಂದು ಹೇಳಿದರು.
ಕರೋನಾ ಹಿನ್ನೆಲೆಯಲ್ಲಿ ಕಾಯ್ದೆ 144 ಜಾರಿ ಇರುವುದರಿಂದ ಯಾವುದೇ ಸಂದರ್ಭದಲ್ಲಿ ಜನರು ಪ್ರತಿಭಟನೆ ಮಾಡಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ಸಿಬ್ಬಂದಿಗಳು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಪೌರಾಯುಕ್ತರು ಪೌರ ಕಾರ್ಮಿಕರ ಜೊತೆಗೆ ಮಾತನಾಡಿ 180 ಜನರ ಬಾಕಿ ವೇತನವನ್ನು ಪಾವತಿ ಮಾಡಿ ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ದೂರವಾಣಿ ಮುಖಾಂತರ ತಿಳಿಸಿದ್ದಾರೆ. 3 ದಿನಗಳೊಳಗೆ ನಿಮ್ಮ ಬಾಕಿ ವೇತನವನ್ನು ಪಾವತಿ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ, ಉರುಕುಂದಪ್ಪ, ಆರ್.ಹನುಮಂತು, ಮುತ್ತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment