ಬಾಕಿವೇತನ ಕೊಡಿಸಲು ಜಿಲ್ಲಾಸ್ಪತ್ರೆ ನೌಕರರ ಒತ್ತಾಯ

ದಾವಣಗೆರೆ.ಜೂ.20; ಪೂಜ್ಯಾಯ ಸೆಕ್ಯೂರಿಟಿ ಕಂಪನಿಯವರು ನೌಕರರ ಸಮರ್ಪಕ ವೇತನ ವಿತರಿಸುತ್ತಿಲ್ಲ.ಈ ಬಗ್ಗೆ ಕ್ರಮವಹಿಸಬೇಕೆಂದು ಒತ್ತಾಯಿಸಿ ಸರ್ಕಾರಿ ಚಿಗಟೇರಿ ಜಿಲ್ಲಾ ಆಸ್ಪತ್ರೆ ದಿನಗೂಲಿ ನೌಕರರ ಡಿ-ಗ್ರೂಪ್ಸ್ ಸಂಘದ ನೇತೃತ್ವದಲ್ಲಿ ನೌಕರರು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾ ಪೋಲೀಸ್ ಕಛೇರಿಗೆ ತೆರಳಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪೂಜ್ಯಾಯ ಕಂಪನಿಯವರು ಕೆಲಸಕ್ಕೆ ಸೇರಿಸಿಕೊಳ್ಳುವ ಮೊದಲು 15 ಸಾವಿರ ರೂ ವೇತನ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಕೇವಲ 4ರಿಂದ 5 ಸಾವಿರ ವೇತನ ಮಾತ್ರ ನೀಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಕೆಲಸದಿಂದ ಕಿತ್ತು ಹಾಕಿಸುವುದಾಗಿ ಬೆದರಿಸುತ್ತಿದ್ದಾರೆ. ಸಮರ್ಪಕ ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನೇತೃತ್ವ ವಹಿಸಿದ ನೌಕರ ಅವಳಪ್ಪ ಅವರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ. ಇದು ಖಂಡನೀಯ. ಕಷ್ಟ ಪಟ್ಟು ಕೆಲಸ ಮಾಡುವ ನಮಗೆ ನ್ಯಾಯ ಒದಗಿಸಬೇಕು. 5 ತಿಂಗಳಿನಿಂದ ವೇತನವಿಲ್ಲದೇ ದುಡಿಯುತ್ತಿದ್ದೇವೆ. ಇದರಿಂದ ತೀವ್ರ ಕಷ್ಟವಾಗುತ್ತಿದೆ. ಮಕ್ಕಳನ್ನು ಶಾಲೆಗೂ ಸೇರಿಸಿಲ್ಲ, ಜೀವನ ನಡೆಸುವುದೇ ದುಸ್ತರವಾಗಿದೆ. ಆದ್ದರಿಂದ ಈ ಕೂಡಲೇ ಕಂಪನಿಯರನ್ನು ಕರೆಯಿಸಿ ಸೂಕ್ತ ಕ್ರಮವಹಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೆ.ಭೀಮಪ್ಪ, ಎ.ಸುರೇಶ್ ಸೇರಿದಂತೆ ನೌಕರರ ವರ್ಗದವರಿದ್ದರು.

Leave a Comment